ಅಂತರರಾಷ್ಟ್ರೀಯ

ಇಸ್ರೇಲ್‍ –ಪ್ಯಾಲೆಸ್ತೇನ್‍ ಸಂಘರ್ಷ: ಸಾವಿನ ಸಂಖ್ಯೆ 208ಕ್ಕೆ ಏರಿಕೆ

ಇಸ್ರೇಲ್‍ –ಪ್ಯಾಲೆಸ್ತೇನ್‍ ಸಂಘರ್ಷ: ಸಾವಿನ ಸಂಖ್ಯೆ 208ಕ್ಕೆ ಏರಿಕೆ

ಗಾಜಾ, ಮೇ 17: ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಈ ತಿಂಗಳ 10 ರಿಂದ ಭುಗಿಲೆದ್ದಿರುವ ಸಂಘರ್ಷದಲ್ಲಿ ಈವರೆಗೆ 208 ಮಂದಿ ಸಾವನ್ನಪ್ಪಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಸೋಮವಾರ ತಿಳಿಸಿವೆ. 

ಪ್ಯಾಲೆಸ್ತೇನ್‍ ಕಡೆ 198 ಮಂದಿ ಹಾಗೂ ಇಸ್ರೇಲ್ ಕಡೆ 10 ಮಂದಿ ಸಾವನ್ನಪ್ಪಿದ್ದಾರೆ. ಪ್ಯಾಲೆಸ್ತೇನ್ ನ 58 ಅಪ್ರಾಪ್ತ ಮಕ್ಕಳು ನತದೃಷ್ಟರಲ್ಲಿ ಸೇರಿದ್ದಾರೆ ಎಂದು ಗಾಜಾದಲ್ಲಿನ ಹಮಾಸ್‍ ನಿಯಂತ್ರಣದ ಆರೋಗ್ಯ ಸಚಿವಾಲಯ ತಿಳಿಸಿದೆ.  

ಸಂಘರ್ಷ ಆರಂಭವಾದ ಈ ತಿಂಗಳ 10ರಿಂದ  ಪ್ಯಾಲೆಸ್ತೇನ್‍ ಕಡೆಯಿಂದ ಗಾಜಾ ಪಟ್ಟಿಯ ಕಡೆ 3,150 ರಾಕೆಟ್‍ ದಾಳಿಗಳು ನಡೆದಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್‍ ಸೇನೆ, ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು 820 ದಾಳಿಗಳನ್ನು ನಡೆಸಿದೆ ಎಂದು ಇಸ್ರೇಲ್‍ ರಕ್ಷಣಾ ಸಚಿವಾಲಯ ತಿಳಿಸಿದೆ. 

ಸುಮಾರು 460 ರಾಕೆಟ್‍ ಗಳು ನಿರ್ದಿಷ್ಟ ಗುರಿ ತಲುಪದೆ ಗಾಜಾ ಪಟ್ಟಿಗೆ ಅಪ್ಪಳಿಸಿವೆ. ಈ ಪೈಕಿ ಇಸ್ರೇಲ್‍ ಕಡೆ ದಾಟಿದ ಶೇಕಡ 90ರಷ್ಟು ರಾಕೆಟ್‍ ಗಳಿಗೆ ಡೋಮ್‍ ಕ್ಷಿಪಣಿ ರಕ್ಷಣಾ ವ್ಯವಸ್ಥೆ ತಡೆದಿದೆ. ದಾಳಿಗಳಲ್ಲಿ ಸುಮಾರು 130 ಪ್ಯಾಲೆಸ್ತೇನ್‍ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇಸ್ರೇಲ್‍ ರಕ್ಷಣಾ ಪಡೆಗಳು ತಿಳಿಸಿವೆ. 

ಗಾಜಾ ಪಟ್ಟಿಯಲ್ಲಿ ಭಾನುವಾರ ರಾತ್ರಿ ಇಸ್ರೇಲ್‍, ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದೆ. ಕಳೆದ ಒಂದು ವಾರದ ಹಿಂದೆ ಆರಂಭವಾದ ಸಂಘರ್ಷದಲ್ಲಿ ಇದು ಭೀಕರ ದಾಳಿ ಎನಿಸಿದೆ ಎಂದು ಮಾಧ್ಯಮ ವರದಿಗಳು ಬಣ್ಣಿಸಿವೆ. ಗಾಜಾದಲ್ಲಿ ರಕ್ಷಣಾ ತಂಡಗಳು ಕಟ್ಟಡಗಳ ಅವಶೇಷಗಳಡಿ ಸಿಕ್ಕಿಬಿದ್ದವರಿಗಾಗಿ ಶೋಧ ನಡೆಸುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.   

ಸುದ್ದಿ ಓದಿ