ಅಗರ್ತಲಾ-ಶಿಲ್ಲಾಂಗ್ ನಡುವೆ ಇಂಡಿಗೋ ವಿಮಾನ ಸೇವೆ ಪುನರಾರಂಭ
ಅಗರ್ತಲಾ, ಜೂನ್ 30: ಅಗರ್ತಲಾ-ಶಿಲ್ಲಾಂಗ್- ಅಗರ್ತಲಾ ನಡುವೆ ವಾರಕ್ಕೆ ಮೂರು ಬಾರಿ ವಿಮಾನ ಸಂಚಾರವನ್ನು ಇಂಡಿಗೋ ಏರ್ ಲೈನ್ಸ್ ಗುರುವಾರದಿಂದ ಪುನರಾರಂಭಿಸಲಿದೆ.
78 ಆಸನ ಸಾಮರ್ಥ್ಯದ ಇಂಡಿಗೋ ಸಂಸ್ಥೆಯ ಎಟಿಆರ್ ವಿಮಾನ ಈಶಾನ್ಯ ಭಾಗದ ಪ್ರಮುಖ ಎರಡು ನಗರಗಳನ್ನು ಸಂಪರ್ಕಿಸಲಿದೆ. ಮೇಘಾಲಯ ರಾಜಧಾನಿ ಶಿಲ್ಲಾಂಗ್ ಮತ್ತು ತ್ರಿಪುರಾ ರಾಜಧಾನಿ ಅಗರ್ತಲಾ ನಡುವೆ ವಾರದಲ್ಲಿ ಸೋಮವಾರ, ಗುರುವಾರ ಮತ್ತು ಶನಿವಾರ ಈ ಸೇವೆ ಲಭ್ಯವಿರಲಿದೆ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ.
ಶಿಲ್ಲಾಂಗ್ ನಿಂದ ಬೆಳಿಗ್ಗೆ 10.20ಕ್ಕೆ ಹೊರಡುವ ವಿಮಾನ 11.20ಕ್ಕೆ ಅಗರ್ತಲಾಗೆ ತಲುಪಲಿದೆ. ವಾಪಸ್ ಮಾರ್ಗದಲ್ಲಿ ಅಗರ್ತಲಾ ದಿಂದ 11.40ಕ್ಕೆ ಹೊರಡುವ ವಿಮಾನ ಒಂದು ತಾಸಿನ ಪ್ರಯಾಣ ಮುಗಿಸಿ ಶಿಲ್ಲಾಂಗ್ ತಲುಪಲಿದೆ.
ಮೇಘಾಲಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಮೂರು ತಿಂಗಳಿನಿಂದ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು.
ಆದರೂ, ಅಗರ್ತಲಾ ಮತ್ತು ಐಜ್ವಾಲ್ ನಡುವಿನ ವಿಮಾನಗಳ ಸಂಚಾರವನ್ನು ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.