99ನೇ ನಾಡಹಬ್ಬ ಉತ್ಸವ ಉದ್ಘಾಟನೆ ಗಡಿಭಾಗದಲ್ಲಿ ಕನ್ನಡದ ಕಂಪು ಮತ್ತಷ್ಟು ಹರಡಲಿ: ಸಿದ್ದರಾಮ ಸ್ವಾಮೀಜಿ
ಲೋಕದರ್ಶನ ವರದಿ
ಬೆಳಗಾವಿ: ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅವರು ಹೇಳಿದರು.
ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಭಾನುವಾರ 11 ರಂದು ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾದ 99ನೇ ನಾಡಹಬ್ಬ ಉತ್ಸವ ಮತ್ತು ಡಾ. ಸಿ.ಕೆ. ಜೋರಾಪುರವರ ಸೇವೆಯ 51 ನೇ ವರ್ಷಾಚರಣೆ ನಿಮಿತ್ತವಾಗಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ವ್ಯಾಪ್ತಿ ಇತ್ತು ಎಂಬ ಐತಿಹಾಸಿಕ ಉಲ್ಲೇಖವನ್ನು ಪ್ರಸ್ತಾಪಿಸಿದರು. ಜನಸಂಖ್ಯೆಯ ಆಧಾರದ ಮೇಲೆ ಭಾಷಾ ಪ್ರದೇಶಗಳ ಕುರಿತು ವಿವಾದ ಸೃಷ್ಟಿಸುವ ಬದಲು, ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಪರಸ್ಪರ ಗೌರವ ಹಾಗೂ ಸೌಹಾರ್ದ ಬೆಳೆಸಬೇಕು. ಎರಡೂ ಭಾಷೆಗಳ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಸಾಂಸ್ಕೃತಿಕ ಸಾಮರಸ್ಯವನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಗಡಿಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನೆಲೆಗೊಳ್ಳಬೇಕು. ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಹಾಗೂ ಹೆಮ್ಮೆ ಹೊಂದಿ, ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು.
ವಂದೇ ಮಾತರಂ ದೇಶಭಕ್ತಿಯ ಸಂಕೇತ:
ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಗೀತೆ ಮಹತ್ವದ ಪಾತ್ರ ವಹಿಸಿದೆ. ದೇಶದ ಪ್ರಕೃತಿ ಸೌಂದರ್ಯವನ್ನು ವರ್ಣಿಸುವುದರ ಜತೆಗೆ ಜನರಲ್ಲಿ ದೇಶಾಭಿಮಾನ ಮೂಡಿಸುವ ಶಕ್ತಿ ಈ ಗೀತೆಗೆ ಇದೆ. ಗೀತೆಯ ಆರು ಚರಣಗಳನ್ನು ಹಾಡುವ ವಿಚಾರದಲ್ಲಿ ವಿವಾದಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಐತಿಹಾಸಿಕ ಮಹತ್ವವನ್ನು ಅರಿತುಕೊಳ್ಳಬೇಕು. ದೇಶಭಕ್ತಿಯ ಭಾವನೆ ಮೂಡಿಸುವ ಈ ಗೀತೆಯನ್ನು ಪೂರ್ಣವಾಗಿ ಹಾಡಲು ಯಾವುದೇ ಅಡೆತಡೆಗಳು ಇರಬಾರದು ಎಂದು ಸಿದ್ದರಾಮ ಶ್ರೀಗಳು ಅಭಿಪ್ರಾಯಪಟ್ಟರು.
ವಂದೇ ಮಾತರಂ ಗೀತೆಯ ಹಿನ್ನೆಲೆ ಮತ್ತು ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದ ಜಗಜಂಪಿ ಅವರ ಕಾರ್ಯವನ್ನು ಶ್ಲಾಘಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹುರುಪು ತುಂಬಿದ ಈ ಗೀತೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ಶ್ರೇಷ್ಠ ದೇಶಭಕ್ತಿಗೀತೆಯಾಗಿದೆ ಎಂದರು.
ನಾಡಿನ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಬೆಳೆಸಿಕೊಳ್ಳಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ. ಮುಂಬರುವ 100ನೇ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಈಗಿನಿಂದಲೇ ಯೋಜನೆ ರೂಪಿಸಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರು ಮಾತನಾಡಿ, ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವದ ಮಾದರಿಯಲ್ಲಿ ಬೆಳಗಾವಿಯ ನಾಡಹಬ್ಬವೂ ವೈಭವದಿಂದ ನಡೆಯಬೇಕು. ನಾಡಿನ ಧರ್ಮ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ವಂದೇ ಮಾತರಂ ಗೀತೆ ಅನೇಕ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದೆ. ಇದು ಭಾರತೀಯರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಗೀತೆಯಾಗಿದ್ದು, ಅದಕ್ಕೆ ಜಾತಿ, ಧರ್ಮ ಹಾಗೂ ಬಣ್ಣದ ದೃಷ್ಟಿಕೋನವನ್ನು ಜೋಡಿಸಬಾರದು. ನಾವೆಲ್ಲರೂ ಭಾರತೀಯರು ಎಂಬ ಏಕತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.