ಸೇನಾ ಕಮಾಂಡರ್ ಹತ್ಯೆ; ಟ್ರಂಪ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ ಇರಾಕ್ ನ್ಯಾಯಾಲಯ
ಕೈರೊ, ಜ 7 :ಇರಾಕ್‍ನ ಶಿಯಾ ಸೇನಾ ಸಮೂಹದ ಉಪಕಮಾಂಡರ್ ಅಬು ಮಹ್ದಿ ಅಲ್-ಮುಹಂದೀಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತನಿಖೆಗೆ ಆದೇಶಿಸಿದ್ದು, ಬಂಧನ ವಾರಂಟ್ ಜಾರಿಗೊಳಿಸಿದೆ. 2020ರ ಜ.3ರಂದು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಟ್ರಂಪ್ ಆದೇಶಿಸಿದ ಡ್ರೋನ್ ದಾಳಿಯಲ್ಲಿ ಇರಾನ್‍ನ ಸೇನಾ ಮುಖಂಡ ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಖಾಸೆಮ್ ಸೊಲೈಮನಿ ಹತ್ಯೆಗೀಡಾಗಿದ್ದರು.
2019ರ ಡಿ.31ರಂದು ಬಾಗ್ದಾದ್‍ನಲ್ಲಿನ ಅಮೆರಿಕ ರಾಯಭಾರಿ ಮೇಲೆ ಹತ್ಯೆಗೆ ಪ್ರತಿಕಾರವಾಗಿ ಟ್ರಂಪ್ ಈ ಡ್ರೋನ್ ದಾಳಿಯನ್ನು ಆದೇಶಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾಕ್ ತಮ್ಮ ದೇಶದಲ್ಲಿನ ಅಮೆರಿಕ ಸೇನಾ ನೆಲೆಯ ಮೇಲೆ ದಾಳಿ ನಡೆಸಿತ್ತು. ಸೇನಾ ಸಮೂಹದ ಉಪ ಕಮಾಂಡರ್ ಹತ್ಯೆಯ ತನಿಖೆ ನಡೆಸಲು ಅಧಿಕಾರ ಹೊಂದಿರುವ ಅಲ್-ರಸಾಫಾ ನ್ಯಾಯಾಲಯ ಇರಾಕಿ ಅಪರಾಧ ಸಂಹಿತೆಯ 406 ನೇ ವಿಧಿ ಅನುಸಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಂಧನ ವಾರಂಟ್ ಹೊರಡಿಸಲು ನಿರ್ಧರಿಸಿದೆ. ತನಿಖಾಧಿಕಾರಿಗಳು ಈ ಅಪರಾಧದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು. ಪ್ರಕರಣಗಳ ಕೇಸ್ ಫೈಲ್‌ಗಳಲ್ಲಿ ಟ್ರಂಪ್ ಅಧಿಕೃತ ಹೇಳಿಕೆಗಳನ್ನು ಒಳಗೊಂಡಿರುವ ವೀಡಿಯೊಗಳಿದ್ದು, ಅದರಲ್ಲಿ ಡ್ರೋನ್ ದಾಳಿ ನಡೆಸಲು ಆದೇಶ ಹೊರಡಿಸಿದೆ ಎಂದು ಸೂಚಿಸುತ್ತದೆ.