ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ನಿಯಮಗಳಲ್ಲಿ ಐಸಿಸಿ ಮಹತ್ವದ ಬದಲಾವಣೆ
ಸಮಯ ವ್ಯರ್ಥ ಮಾಡುವುದು, ಕ್ರಿಕೆಟ್ ಚೆಂಡಿನ ಗಾತ್ರ ಮತ್ತು ತೂಕ, ಫೀಲ್ಡಿಂಗ್ ನಿಯಮಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಆಧುನಿಕ ಕ್ರಿಕೆಟ್‌ನ ಅಗತ್ಯಗಳಿಗೆ ಅನುಗುಣವಾಗಿ ನಿಯಮಗಳನ್ನು ರೂಪಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಐಸಿಸಿ ಪುರುಷರ ಕ್ರಿಕೆಟ್ ಸಮಿತಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
“ಕ್ರಿಕೆಟ್ ಚೆಂಡುಗಳಿಗೆ ಸಂಬಂಧಿಸಿದ ನಿಯಮಗಳು, ಫೀಲ್ಡಿಂಗ್‌ನ ಕೆಲವು ಅಂಶಗಳ ಕುರಿತು ಹೆಚ್ಚಿನ ಸ್ಪಷ್ಟತೆ ಹಾಗೂ ಆಟದ ವೇಗವನ್ನು ಸುಧಾರಿಸುವ ಕ್ರಮಗಳು ಸೇರಿದಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆಧುನಿಕ ಕ್ರಿಕೆಟ್‌ನ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಆಟದ ಸಮಗ್ರತೆ ಮತ್ತು ನಿಯಮಗಳ ಏಕರೂಪತೆಯನ್ನು ಕಾಪಾಡುವ ಉದ್ದೇಶದಿಂದ ಈ ಬದಲಾವಣೆಗಳನ್ನು ಪರಿಗಣಿಸಲಾಗಿದೆ,” ಎಂದು ಗಂಗೂಲಿ ಹೇಳಿದ್ದಾರೆ.
ಹೊಸ ಸಮಯ ವ್ಯರ್ಥ ನಿಯಮಗಳ ಪ್ರಕಾರ, ಬ್ಯಾಟರ್ ನಿಗದಿತ ಸಮಯದೊಳಗೆ ಮುಂದಿನ ಎಸೆತ ಎದುರಿಸಲು ಸಿದ್ಧರಾಗದಿದ್ದರೆ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿ ಅಂತಿಮ ಎಚ್ಚರಿಕೆ ನೀಡಲಾಗುತ್ತದೆ. ಮೂರನೇ ಹಾಗೂ ನಂತರದ ಪ್ರತಿಯೊಂದು ತಪ್ಪಿಗೂ ಫೀಲ್ಡಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್‌ಗಳನ್ನು ನೀಡಲಾಗುತ್ತದೆ. ಪದೇಪದೆ ನಿಯಮ ಉಲ್ಲಂಘಿಸಿದರೆ ಕೋಡ್ ಆಫ್ ಕಂಡಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ.
ಪುರುಷರು, ಮಹಿಳೆಯರು ಮತ್ತು ಕಿರಿಯರ ಕ್ರಿಕೆಟ್‌ಗೆ ಪ್ರತ್ಯೇಕ ಗಾತ್ರ ಹಾಗೂ ತೂಕದ ಚೆಂಡುಗಳ ಮಾನದಂಡವನ್ನೂ ಐಸಿಸಿ ಪರಿಚಯಿಸಿದೆ. ಈ ಹಿಂದೆ ಮಹಿಳಾ ಹಾಗೂ ಕಿರಿಯರ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ಚೆಂಡುಗಳನ್ನು ಬಳಸಲಾಗುತ್ತಿತ್ತು.
‘ಓವರ್‌ಥ್ರೋ’ ಕುರಿತ ನಿಯಮಕ್ಕೂ ಸ್ಪಷ್ಟತೆ ನೀಡಲಾಗಿದೆ. ರನ್ ತಡೆಯಲು ಅಥವಾ ರನ್‌ಔಟ್ ಮಾಡಲು ಚೆಂಡನ್ನು ಸ್ಟಂಪ್‌ಗಳತ್ತ ಉದ್ದೇಶಪೂರ್ವಕವಾಗಿ ಎಸೆಯುವ ಪ್ರಯತ್ನವನ್ನು ಓವರ್‌ಥ್ರೋ ಎಂದು ಪರಿಗಣಿಸಲಾಗುತ್ತದೆ. ಆದರೆ ಫೀಲ್ಡರ್‌ನ ಮಿಸ್‌ಫೀಲ್ಡ್ ಅನ್ನು ಓವರ್‌ಥ್ರೋ ಎಂದು ಪರಿಗಣಿಸಲಾಗುವುದಿಲ್ಲ.
ಚೆಂಡು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವ ಸಮಯವನ್ನು ನಿರ್ಧರಿಸುವಲ್ಲಿ ಅಂಪೈರ್‌ಗಳಿಗೆ ಹೆಚ್ಚಿನ ವಿವೇಚನೆಯನ್ನೂ ನೀಡಲಾಗಿದೆ. ಚೆಂಡು ಬೌಲರ್ ಅಥವಾ ವಿಕೆಟ್‌ಕೀಪರ್ ಕೈಯಲ್ಲೇ ಇರಬೇಕು ಎಂಬುದು ಕಡ್ಡಾಯವಲ್ಲ.
ರನ್‌ಔಟ್ ಅಥವಾ ಸ್ಟಂಪಿಂಗ್ ಸಂದರ್ಭದಲ್ಲಿ ಫೀಲ್ಡರ್ ಚೆಂಡನ್ನು ಹಿಡಿದಿದ್ದಾನೆ ಎಂದು ಪರಿಗಣಿಸಲು ಸಂಪೂರ್ಣ ನಿಯಂತ್ರಣ ಅಗತ್ಯ. ಸ್ಟಂಪ್‌ಗಳನ್ನು ಬೀಳಿಸುವ ಸಂದರ್ಭದಲ್ಲಿ ಕೈಯಿಂದ ಚೆಂಡನ್ನು ಕೇವಲ ಸ್ಪರ್ಶಿಸುವುದು ಮಾತ್ರ ಸಾಕಾಗುವುದಿಲ್ಲ.
ಟೆಸ್ಟ್ ಕ್ರಿಕೆಟ್‌ನಲ್ಲಿ ಹಗಲು ವೇಳೆ ಪಿಂಕ್ ಚೆಂಡು ಬಳಸುವ ಅವಕಾಶವನ್ನು ಪ್ರಾಯೋಗಿಕವಾಗಿ ಕಲ್ಪಿಸಲಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳು ಒಪ್ಪಿಕೊಂಡರೆ, ಕೆಟ್ಟ ಬೆಳಕಿನಿಂದ ಉಂಟಾಗುವ ಆಟದ ವ್ಯತ್ಯಯವನ್ನು ಕಡಿಮೆ ಮಾಡಲು ಪಿಂಕ್ ಚೆಂಡು ಬಳಸಬಹುದು. ಒಮ್ಮೆ ಈ ನಿರ್ಧಾರ ಕೈಗೊಂಡ ಬಳಿಕ ಟೆಸ್ಟ್ ಪಂದ್ಯದ ವೇಳೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.
ದಿನದ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೂ ಓವರ್ ಪೂರ್ಣಗೊಳ್ಳದೇ ಇದ್ದರೆ ಮತ್ತು ಆಟಕ್ಕೆ ಸೂಕ್ತ ಪರಿಸ್ಥಿತಿಗಳು ಇದ್ದಲ್ಲಿ ಪಂದ್ಯವನ್ನು ತಕ್ಷಣವೇ ಅಂತ್ಯಗೊಳಿಸುವ ಅಗತ್ಯವಿಲ್ಲ. ಉಳಿದ ಎಸೆತಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇನಿಂಗ್ಸ್‌ಗಳ ನಡುವಿನ ವಿರಾಮವನ್ನು 15 ನಿಮಿಷಗಳಿಗೆ ನಿಗದಿಪಡಿಸಲಾಗಿದೆ. ಆಟದ ಸಮಯ ನಷ್ಟವಾಗಿದ್ದರೆ, ಈ ವಿರಾಮವನ್ನು ಕನಿಷ್ಠ 10 ನಿಮಿಷಗಳಿಗೆ ಇಳಿಸಬಹುದಾಗಿದೆ.
ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಡ್ರಿಂಕ್ಸ್ ವಿರಾಮದ ವೇಳೆ ಮುಖ್ಯ ಕೋಚ್ ಅಥವಾ ಕೋಚಿಂಗ್ ಸಿಬ್ಬಂದಿಯಲ್ಲಿನ ನಿಯೋಜಿತ ಸದಸ್ಯರು ಮೈದಾನಕ್ಕೆ ಪ್ರವೇಶಿಸಲು ಈಗ ಅವಕಾಶ ನೀಡಲಾಗಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ ವೈಡ್ ಬಾಲ್ ನಿಯಮವನ್ನೂ ಶಾಶ್ವತಗೊಳಿಸಲಾಗಿದೆ. ವೈಡ್ ನಿರ್ಧರಿಸುವಾಗ ಚೆಂಡು ಎಸೆಯುವ ಕ್ಷಣದಲ್ಲಿ ಬ್ಯಾಟರ್‌ನ ಕಾಲಿನ ಸ್ಥಾನವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಬಳಿಕ ಬ್ಯಾಟರ್ ಆಫ್‌ಸೈಡ್‌ನತ್ತ ಚಲಿಸಿದರೂ ಈ ಮಾನದಂಡ ಬದಲಾಗುವುದಿಲ್ಲ.
ಆಧುನಿಕ ಕ್ರಿಕೆಟ್‌ನ ಬದಲಾದ ಆಟದ ಶೈಲಿಗೆ ಅನುಗುಣವಾಗಿ ನಿಯಮಗಳಲ್ಲಿ ಸ್ಪಷ್ಟತೆ ಮತ್ತು ಏಕರೂಪತೆ ತರಲು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.