ಮೂಡಲಗಿ

ಶ್ರದ್ಧಾಭಕ್ತಿಯಿಂದ ಹಳ್ಳೂರ ದ್ಯಾಮವ್ವಾದೇವಿ, ಮಹಾಲಕ್ಷ್ಮೀದೇವಿ ಜಾತ್ರೆ

ಶ್ರದ್ಧಾಭಕ್ತಿಯಿಂದ ಹಳ್ಳೂರ ದ್ಯಾಮವ್ವಾದೇವಿ, ಮಹಾಲಕ್ಷ್ಮೀದೇವಿ ಜಾತ್ರೆ

ಎರಡನೇ ದಿನದಂದು ಅದ್ದೂರಿ ರಥೋತ್ಸವ* 10 ಟನ್ ಭಂಡಾರ ತೂರಿದ ಭಕ್ತರು* ಇನ್ನೂ 6 ದಿನಗಳ ಕಾಲ ಜಾತ್ರೆಯಲ್ಲಿ ವಿಶೇಷ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು 

ಮೂಡಲಗಿ 24: ಐತಿಹಾಸಿಕ ಪರಂಪರೆ ಹೊಂದಿರುವ ಸಮೀಪದ ಹಳ್ಳೂರ ಗ್ರಾಮದ ಭಂಡಾರಮಯ ದ್ಯಾಮವ್ವಾದೇವಿ ಹಾಗೂ ಮಹಾಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದಲ್ಲಿ ಇಡೀ ಗ್ರಾಮದ ಪರಿಸರವೆಲ್ಲಾ ಬಣ್ಣ ಬಣ್ಣದ ದೀಪಗಗಳಿಂದ ವರ್ಣರಂಜಿತವಾಗಿತ್ತು. ಸಡಗರ, ಸಂಭ್ರಮದ ಛಾಯೆ ಆವರಿಸಿತ್ತು. ಇನ್ನೂ ದ್ಯಾಮವ್ವಾದೇವಿಯ ರಥೋತ್ಸವದ ಮೆರವಣಿಗೆಯಲ್ಲಿ ಭಂಡಾರದ ಭವ್ಯತೆಯಲ್ಲಿ ಮಿಂದೆದ್ದ ಅಪಾರ ಭಕ್ತ ಸಮೂಹ ಜಾತ್ರೆಯ ಸಂಭ್ರಮದಲ್ಲಿ ತಲ್ಲೀನರಾಗಿದ್ದರು. 

ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಮೂರು ಗ್ರಾಮಗಳ ಗ್ರಾಮದೇವತೆ ದ್ಯಾಮವ್ವಾದೇವಿ ಹಾಗೂ ಮಹಾಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನದಂದು (ಮಂಗಳವಾರ) ರಾತ್ರಿ 8ಗಂಟೆಗೆ ಬಸವಣ್ಣನ ಓಣಿ ಮಾರ್ಗವಾಗಿ ಪ್ರಾರಂಭವಾದ ರಥೋತ್ಸವ ಮೆರವಣಿಗೆಯೂ ಗ್ರಾಮದ ಪ್ರಮುಖ ಬೀದಿಗಳಿಂದ ಬುಧುವಾರ ಮದ್ಯಾಹ್ನ 1 ಗಂಟೆಗೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಆಗಮಿಸಿತ್ತು. ರಥೋತ್ಸವದ ಮುಂದೆ ಕನ್ನಡಾಳ ಬಾಸಿಂಗ್, ಉಚಾಯಿ, ಹೂವಿ ಹಾರ, ಕರಡಿ ಮಜಲು, ಸಾಂಬಳ, ಸಾರವಾಡ ಗೊಂಬೆಗಳ ಕುಣಿತ, ಆನೆ ಮೆರವಣಿಗೆ, ಮಂಗಳಮುಖಿಯರ ಕುಣಿತ ಹಾಗೂ ವಿವಿಧ ವಾಧ್ಯಮೇಳಗಳೊಂದಿಗೆ ಮೆರವಣಿಗೆಯ ಮಾರ್ಗದುದ್ದಕ್ಕೂ ಯುವಕರು ಹಾಗೂ ಹಿರಿಯರು ವಾಧ್ಯಗಳ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ರಥೋತ್ಸವದ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.  

ಹಳ್ಳೂರವ್ವಾಕಿ ಜೈ ಎಂಬ ಭಕ್ತಿ ಭಾವದ ಹರ್ಷೋಧ್ಘಾರದಲ್ಲಿ ಭಂಡಾರದ ಬಣ್ಣದಲ್ಲಿ ಮಿಂದೆದ್ದ ಭಕ್ತ ಸಮೂಹ ಇಡೀ ಗ್ರಾಮದ ಪರಿಸರವನ್ನೇ ಸಂಪೂರ್ಣ ಹಳದಿಮಯ ಆಕಾರಕ್ಕೆ ಪರಿವರ್ತಿಸಿತ್ತು. ಶ್ರದ್ಧಾಭಕ್ತಿ ಹಾಗೂ ಭಂಡಾರ ಎರಚಾಟದ ಆರಾಧನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಜಾತ್ರೆಯ ವೈಶಿಷ್ಟ್ಯತೆ. 17ವರ್ಷಕ್ಕೆ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಹಿನ್ನಲೆ ಪತ್ರಿ ಮನೆ-ಮನದಲ್ಲಿ ಜಾತ್ರೆಯ ಹರ್ಷದ ಹೊನಲು, ಸಂತಸದ ಘಳಿಗೆಯಲ್ಲಿ ಜಾತ್ರೆಯಲ್ಲಿ ರಸಪೂರಿ ಭೋಜನದ ಸವಿರುಚಿ ಸವಿದು, ಪರಸ್ಪರ ಭಂಡಾರ ಎರರಚಾಟದಲ್ಲಿ ಪಾಲ್ಗೊಂಡ ಬಂಧುಗಳು, ಸ್ನೇಹಿತರು ಹಾಗೂ ಅನೇಕ ಹಳ್ಳಿ, ಪಟ್ಟಣಗಳಿಂದ ಆಗಮಿಸಿದ್ದ ಅಪಾರ ಭಕ್ತರು ಇಡೀ ಜಾತ್ರೆಗೆ ಮೆರುಗು ತುಂಬಿದ್ದು ಕಂಡು ಬಂದಿತು. 

ಇನ್ನೂ ಜಾತ್ರಾ ಮಹೋತ್ಸವದಲ್ಲಿ ಒಂದು ಲಕ್ಷಕಿಂತ ಅಧಿಕ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತವರು ರಥೋತ್ಸವಕ್ಕೆ ಭಂಡಾರ ಎರಚಿ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು. ಮೇ 22ರಿಂದ ಪ್ರಾರಂಭವಾದ ಈ ಜಾತ್ರೆಯಲ್ಲಿ ಇಲ್ಲಿಯವರೆಗೂ ಸುಮಾರು 10 ಟನ್ ಭಂಡಾರ ತೂರಾಡಿ ಭಕ್ತಿ ಮೆರೆದರು. ಇನ್ನೂ 6 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿ ದಿನ ವಿಶೇಷವಾದ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳು ಜರಗುವವು. 

ಜಾತ್ರಾ ಮಹೋತ್ಸವದಲ್ಲಿ ಯಾವುದೇ ತೊಂದರೆ ಆಗದಂತೆ ದೇವಸ್ಥಾನದ ಕಮಿಟಿಯವರು ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ ಭಕ್ತರ ನೂಕು ನುಗ್ಗಾಟದಲ್ಲಿಯೂ ಸಹ ಶಾಂತಿಯಿಂದ ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರಥೋತ್ಸವದ ಬಳಿಕ ಸಹಸ್ರ ಸಹಸ್ರ ಜನರ ಮಧ್ಯೆ ಕಣಕಿನ ಕೋಣದ ವಿಸರ್ಜನೆ ಕಾರ್ಯಕ್ರಮ ಜರುಗಿತು. 


ಸುದ್ದಿ ಓದಿ