ವಿಜಯಪುರ

ಋಣಾತ್ಮಕ ಭಾವದಿಂದ ಹೊರಬನ್ನಿ: ರಮೇಶ ಹಾದಿಮನಿ

ಋಣಾತ್ಮಕ ಭಾವದಿಂದ ಹೊರಬನ್ನಿ: ರಮೇಶ ಹಾದಿಮನಿ

ಲೋಕದರ್ಶನ ವರದಿ 

ವಿಜಯಪುರ 22: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸನ್ನುಗಳಿಸಲು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಓರೆಹಚ್ಚಿ ತಮ್ಮಲ್ಲಿರುವ ಕೀಳರಿಮೆ ಮನೋಭಾವನೆ, ಋಣಾತ್ಮಕ ಚಿಂತನೆಯನ್ನು ಹೋಗಲಾಡಿಸಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ನನ್ನಿಂದ ಸಾಧ್ಯವಿಲ್ಲ ಅಥವಾ ಆಗುವುದಿಲ್ಲ ಎಂಬ ನಕಾರಾತ್ಮಕ ಮನೋಭಾವನೆಯನ್ನು ತೊಲಗಿಸಬೇಕು. ಎಂದು ಗೆಜ್ಜಿ ಕರಿಯರ್ ಅಕ್ಯಾಡೆಮಿಯ ರಮೇಶ ಹಾದಿಮನಿ ಅವರು ಹೇಳಿದರು.  ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.20 ರಂದು ಜರುಗಿದ ಸಾಂಸ್ಕೃತಿಕ, ಕ್ರೀಡೆ, ಎನ್‌.ಎಸ್‌.ಎಸ್‌. ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನ ಅತೀ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಸದಾ ಜ್ಞಾನವನ್ನು ಪಡೆಯಲು ಹಂಬಲ ಹೊಂದಿರಬೇಕು. ಕೇವಲ ಪದವಿ ಅಥವಾ ಅಂಕ ಪಡೆಯುವದು ಶಿಕ್ಷಣದ ಉದ್ದೇಶವಾಗಬಾರದು. ಕಲಿಕೆ ನಿಂತ ನೀರಾಗಬಾರದು. ಅದು ನಿರಂತರವಾಗಿದ್ದು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿಯೊಬ್ಬರೂ ಜನನಿ, ಶಿಕ್ಷಣ ನೀಡಿದ ಮಾತೃಸಂಸ್ಥೆ ಮತ್ತು ಬದುಕಲು ಆಶ್ರಯ ನೀಡಿದ ಜನ್ಮಭೂಮಿ ಇವುಗಳ ಋಣ ತೀರಿಸವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಎಲ್ಲ ಸಾಧಕರ ಜೀವನವನ್ನು ಗಮನಿಸಿದರೆ. ಪ್ರತಿಯೊಬ್ಬರು ಒಂದಿಲ್ಲವೊಂದು ಸಮಸ್ಯೆಯನ್ನು ಎದುರಿಸಿದ್ದಾರೆ. ಆದ್ದರಿಂದ ಸಮಸ್ಯೆಯನ್ನು ಎದುರಿಸುವ ಹಾಗೂ ಮುಂದಿನ ಗುರಿಯ ಸಾಧನೆಯತ್ತ ದಿಟ್ಟ ಹೆಜ್ಜೆ ಇಡುತ್ತಾ ಸಾಗಿದರೆ, ಸಾಧನೆ ಎಂಬುದು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಸಲಹೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ, ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸದೊಂದಿಗೆ ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಯತ್ತ ಪ್ರಯತ್ನಶೀಲರಾಗಬೇಕು ಎಂದರು. ಪ್ರತಿಯೊಬ್ಬರಲ್ಲಿಯೂ ವಿಶಿಷ್ಟವಾದ ಪ್ರತಿಭೆ, ಜಾಣ್ಮೆ, ಕೌಶಲ್ಯ ಪ್ರಾವೀಣ್ಯತೆ, ನೈಪುಣ್ಯತೆ ಮತ್ತು ಸಾಮರ್ಥ್ಯಗಳಿರುತ್ತವೆ. ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹಾಕಲು ದೊರೆಯುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಸಾಧನೆ ತೋರಬೇಕೆಂದು ಕಿವಿಮಾತು ಹೇಳಿದರು.  

ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎ.ಆರ್‌.ದಿಂಡೂರ, ಸದಾಶಿವ ಗುಡ್ಡೋಡಗಿ, ಸುಮಂಗಲಾ ಕೋಟಿ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಚಂದ್ರಕಾಂತ.ಬಿ,  ಕ್ರೀಡಾ ನಿರ್ದೇಶಕರಾದ ಪ್ರೊ. ಸಂಗಮೇಶ ಗುರವ, ಎನ್‌.ಎಸ್‌.ಎಸ್‌. ಘಟಕಗಳ  ಅಧಿಕಾರಿಗಳಾದ ಡಾ. ಸುನೀಲ ತೋಂಟಾಪೂರ, ಡಾ. ದೇವೇಂದ್ರಗೌಡ ಪಾಟೀಲ, ಪ್ರೊ. ಸುನೀಲ ಹತ್ತಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ, ಸ್ಕೌಟ್ಸ್‌ ್ಘ ಗೈಡ್ಸ್‌ ಸಂಚಾಲಕರಾದ ಡಾ. ಪ್ರಕಾಶ ಹಾವೇರಿಪೇಠ, ಡಾ. ಮಮತಾ  ಬನ್ನೂರ, ವಿದ್ಯಾರ್ಥಿನಿ ಪ್ರತಿನಿಧಿ ಗೀತಾ ರಾಠೋಡ ಇನ್ನಿತರರು ಸಹ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ರಮೇಶ ಹಾದಿಮನಿ ಅವರಿಗೆ ಸನ್ಮಾನ ಮಾಡಲಾಯಿತು. 

ಸಮಾರಂಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗವು ಹಮ್ಮಿಕೊಂಡ ವಿವಿಧ ಸ್ಥರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೈದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಲಾಯಿತು.  ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಚಂದ್ರಕಾಂತ.ಬಿ. ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.ಪ್ರೊ. ಸಂಗಮೇಶ ಗುರವ ಅವರು ಕ್ರೀಡಾ ವಿಭಾಗದ ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ವಿವರಿಸಿದರು. ಡಾ. ಶಿವಾನಂದ ಜಮಾದಾರ ಹಾಗೂ ಡಾ. ಕೇಶವಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ