ಎಲ್ಲರನ್ನೂ ಕ್ಷಮಿಸಿದ್ದೇವೆ.. ಯಾರ ವಿರುದ್ದವೂ ಪ್ರತಿಕಾರ ಕೈಗೊಳ್ಳುವುದಿಲ್ಲ; ತಾಲಿಬಾನ್
ಕಾಬೂಲ್, ಆಗಸ್ಟ್ 18: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮೊಟ್ಟ ಮೊದಲ ಬಾರಿಗೆ ತಾಲಿಬಾನಿಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾತನಾಡಿ, 20 ವರ್ಷಗಳ ನಂತರ ವಿದೇಶಿ ಸೇನೆಯನ್ನು ಹಿಮ್ಮೆಟ್ಟಿಸಿದ್ದೇವೆ. ಆಂತರಿಕವಾಗಿ, ಬಾಹ್ಯವಾಗಿ ಯಾವುದೇ ಶತೃತ್ವವನ್ನು ನಾವು ಬಯಸುವುದಿಲ್ಲ . ಮಹಿಳೆಯರ ಹಕ್ಕುಗಳ ಯಾವುದೇ ಭಂಗ ತರುವುದಿಲ್ಲ ಎಂದು ಹೇಳಿದ್ದಾರೆ. ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ ಯಾರ ವಿರುದ್ಧವೂ ಪ್ರತೀಕಾರ ಕೈಗೊಳ್ಳುವುದಿಲ್ಲ. ನಾಗರೀಕರ ಮನೆಗಳ ಮೇಲೆ ಯಾವುದೇ ದಾಳಿ ಶೋಧ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ ... "ನಾವು ಅಫ್ಘಾನಿಸ್ತಾನದಲ್ಲಿರುವ ಇತರ ದೇಶಗಳ ಜನರಿಗೆ ಯಾವುದೇ ಹಾನಿ, ತೊಂದರೆ ನೀಡುವುದಿಲ್ಲ. ಕಾಬೂಲ್ ವಿಮಾನ ನಿಲ್ದಾಣದಲ್ಲಿರುವವರು ಕೂಡಲೇ ವಾಪಸ್ಸು ಬರಬೇಕು ಎಂದು ಮನವಿಮಾಡಿದರು. ಇಸ್ಲಾಮಿಕ್ ಕಾನೂನಿನ ಪ್ರಕಾರ ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ನೀಡುತ್ತೇವೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಅವರು ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ, ಎಂದು ಮುಜಾಹಿದ್ ಹೇಳಿದ್ದಾರೆ. ಈ ಸಂಬಂಧ ಅವರು ಸ್ಥಳೀಯ ಟೊಲೋ ನ್ಯೂಸ್ ನೊಂದಿಗೆ ಮಾತನಾಡಿ ತಾಲಿಬಾನ್ ಅನುಸರಿಸಲಿರುವ ಕ್ರಮಗಳನ್ನು ಮಂಗಳವಾರ ಬಹಿರಂಗಪಡಿಸಿದ್ದಾರೆ.
ಎಲ್ಲಾ ಮಾಧ್ಯಮ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಮುಂದುವರಿಸಬೇಕು ಎಂದು ಬಯಸುತ್ತೇವೆ ಎಂದು ಮುಜಾಹಿದ್ ಹೇಳಿದರು. ಆದಾಗ್ಯೂ, ಮಾಧ್ಯಮಕ್ಕೆ ಮೂರು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. "ಯಾವುದೇ ಪ್ರಸಾರ ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾಗಿರಬಾರದು. ನಿಷ್ಪಕ್ಷಪಾತವಾಗಿರಬೇಕು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಪ್ರಸಾರ ಇರಬಾರದು ಎಂದು ಸಲಹೆ ನೀಡಿದ್ದಾರೆ. ಜನರ ಜೀವನೋಪಾಯ ಸುಧಾರಿಸಲು ಕೆಲಸ ಮಾಡುತ್ತೇವೆ, "ಎಂದು ಅವರು ಹೇಳಿದ್ದಾರೆ.