"ಕುಡುಕ ನನ್ನ ಮಕ್ಳು" ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ
ಲೋಕದರ್ಶನ ವರದಿ
ಬೆಂಗಳೂರು: ಕಲಾಭೂಮಿ ಕಂಬೈನ್ಸ್ ಬ್ಯಾನರ್ನಡಿ ಆಸ್ಕರ್ ಕೃಷ್ಣ ನಿರ್ದೇಶನ ಮಾಡುತ್ತಿರುವ "ಕುಡುಕ ನನ್ನ ಮಕ್ಳು" ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 20 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಚಿತ್ರದ ಪ್ರಮುಖ ಭಾಗಗಳನ್ನು ಸೆರೆಹಿಡಿಯಲಾಗಿದೆ. ಇದೀಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.
ಚಿತ್ರದಲ್ಲಿ ಚಂದ್ರ್ರಭ, ವಿನೋದ್ ಗೊಬ್ರಗಾಲ್, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್, ಚೈತ್ರಾ ಕೊಟ್ಟೂರು ಸೇರಿದಂತೆ ಹಲವು ಹಾಸ್ಯ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಂಜು ಕವಿ ಸಾಹಿತ್ಯ ಮತ್ತು ಸಂಗೀತ ನೀಡಿದ್ದು, ವಿನಯ್ ಗೌಡ ಛಾಯಾಗ್ರಹಣ, ಅಯ್ಯೂರು ಸಂಕಲನ ನಿರ್ವಹಿಸಿದ್ದಾರೆ. ಸಂಭಾಷಣೆಯನ್ನು ವೆಂಕಟ್ ಬರೆದಿದ್ದಾರೆ.
ಅರುಣ್ ಎಲ್. ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್.ಎಚ್., ರವಿ ನಾಯಕ್, ನಿಂಗರಾಜು ಬಿ. ಹಾಗೂ ಲೋಕೇಶ್ ಕೆ.ಎಸ್. ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 25, 30, 35 ಹಾಗೂ 40 ವರ್ಷದ ನಾಲ್ವರು ವ್ಯಕ್ತಿಗಳ ಜೀವನದಲ್ಲಿ ಮದ್ಯಪಾನದ ಪರಿಣಾಮ ಮತ್ತು ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ಮನರಂಜನೆಯೊಂದಿಗೆ ಚಿತ್ರದಲ್ಲಿ ಮೂಡಿಸಲಾಗಿದೆ ಎಂದು ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ. ಚಿತ್ರವನ್ನು ದಸರಾ ಅಥವಾ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಮಾಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.