ಮನರಂಜನೆ

ನಾನಾ ಪಾಟೇಕರ್ ಸಾವು: ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಗೋವಾ ಪೊಲೀಸರು, ತನಿಖೆ ಆರಂಭ

ನಾನಾ ಪಾಟೇಕರ್ ಸಾವು: ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಗೋವಾ ಪೊಲೀಸರು, ತನಿಖೆ ಆರಂಭ

ಪಣಜಿ, ಅ. 9 : ಹಿರಿಯ ನಟ ನಾನಾ ಪಾಟೇಕರ್ ಅವರ ಸಾವಿನ ಕುರಿತು ಗೋವಾ ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿನ ನಿಖರ ಸಂದರ್ಭಗಳು ಹಾಗೂ ವೈದ್ಯಕೀಯ ಕಾರಣವನ್ನು ಪತ್ತೆಹಚ್ಚಲು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯ ಸೆಕ್ಷನ್ 194ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಅಧಿಕೃತ ಪರಿಶೀಲನೆ ಅಗತ್ಯವಿರುವ ಸಂದರ್ಭಗಳಲ್ಲಿ ಸಂಭವಿಸುವ ಸಾವುಗಳ ಕುರಿತು ಪೊಲೀಸ್ ವಿಚಾರಣೆ ನಡೆಸಲು ಈ ಸೆಕ್ಷನ್ ಅವಕಾಶ ಕಲ್ಪಿಸುತ್ತದೆ.

ನಾನಾ ಪಾಟೇಕರ್ (75) ಅವರ ಆರೋಗ್ಯ ಗುರುವಾರ ಮುಂಜಾನೆ ಹದಗೆಟ್ಟ ಹಿನ್ನೆಲೆಯಲ್ಲಿ, ಗೋವಾದ ದೋನಾ ಪೌಲಾ ಪ್ರದೇಶದಲ್ಲಿರುವ ಅವರ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ. ಆದರೆ, ವೈದ್ಯರು ಅವರನ್ನು ಬದುಕಿಸಲು ನಡೆಸಿದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದರು.

ಪ್ರಾಥಮಿಕ ವರದಿಗಳ ಪ್ರಕಾರ, ನಟನಿಗೆ ಎದೆಯ ಎಡಭಾಗದಲ್ಲಿ ನೋವು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ತಮಗೆ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿ ಅವರು ಮುಂಜಾನೆ ಸುಮಾರು 2.30ಕ್ಕೆ ಸ್ನೇಹಿತರೊಬ್ಬರಿಗೆ ಸಂದೇಶ ಕಳುಹಿಸಿದ್ದರು ಎಂದು ವರದಿಯಾಗಿದೆ.

ಆ ಸಂದೇಶದ ಬಳಿಕ ಸ್ನೇಹಿತರು ಮುಂಜಾನೆ ಸುಮಾರು 4 ಗಂಟೆಗೆ ನಾನಾ ಪಾಟೇಕರ್ ಅವರ ನಿವಾಸಕ್ಕೆ ತಲುಪಿದ್ದು, ನಂತರ ವೈದ್ಯಕೀಯ ನೆರವು ಪಡೆಯಲಾಯಿತು ಎಂದು ತಿಳಿದುಬಂದಿದೆ.

ನಟನ ಸಾವಿಗೆ ಕಾರಣವಾದ ನಿಖರ ಸಂದರ್ಭಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಓದಿ