ವ್ಯಸನದ ಹೊಡೆತಕ್ಕೆ ಕುಟುಂಬ ಬಲಿಯಾಗದಂತೆ ತಡೆಯಬೇಕು: ಹೆಬ್ಬಾಳಕರ್
ಬೆಳಗಾವಿ 05: ಪಾನವ್ಯಸನ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ; ಅದರ ಪರಿಣಾಮ ಇಡೀ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ, ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಮೇಲೆ ಬೀರುತ್ತದೆ. ಆದ್ದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಲಗಾ ಗ್ರಾಮದ ಸುವರ್ಣ ಗಾರ್ಡನ್ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಸನದಿಂದ ಹೊರಬರುವುದು ಸುಲಭದ ಕೆಲಸವಲ್ಲ. ಅದಕ್ಕೆ ಮನೋಬಲ, ಕುಟುಂಬದ ಬೆಂಬಲ ಹಾಗೂ ಸಮಾಜದ ಪ್ರೋತ್ಸಾಹ ಅಗತ್ಯ. ವ್ಯಸನ ತ್ಯಜಿಸಿ ಹೊಸ ಬದುಕು ಆರಂಭಿಸಿರುವವರನ್ನು ಅಭಿನಂದಿಸುವುದು ಅವರ ಸಾಧನೆಗೆ ಮಾತ್ರವಲ್ಲ, ಕುಟುಂಬವನ್ನು ಮತ್ತೆ ಸಂತೋಷದತ್ತ ಕೊಂಡೊಯ್ಯುತ್ತಿರುವುದಕ್ಕೂ ಗೌರವ ಸಲ್ಲಿಸಿದಂತಾಗಿದೆ ಎಂದರು.
ಯುವಕರು ವ್ಯಸನಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಮೂಡಿಸುವುದು ಅತ್ಯಗತ್ಯ. ಕುಟುಂಬ, ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ವ್ಯಸನದಿಂದ ಹೊರಬರಲು ಪ್ರಯತ್ನಿಸುವವರನ್ನು ಹೀಯಾಳಿಸದೆ, ಕೈಹಿಡಿದು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಗಾಂಧೀಜಿ ಕನಸು ಕಂಡ ಸ್ವಚ್ಛ, ಆರೋಗ್ಯವಂತ ಹಾಗೂ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಅಡವೀಶ್ವರ ದೇವರು, ಡಾ. ಜಿ.ಆರ್. ಸೊನೇರ್, ನಟರಾಜ ಬಾದಾಮಿ, ಡಾ. ಶ್ರೀಕಾಂತ್ ವಿ.ಎನ್., ಚಾರುಕೀರ್ತಿ ಸೈಬಣ್ಣವರ್, ಮಲ್ಲಿಕಾರ್ಜುನ ವಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.