ಕೃಷಿ ಕ್ಷೇತ್ರದ ಸುಧಾರಣೆ, ಬಾಧಿತರಾದವರಿಗೆ ಸೂಕ್ತ ಉದ್ಯೋಗಾವಕಾಶ ಸಿಗಬೇಕು
ವಾಷಿಂಗ್ಟನ್, ಜ 15 :ಭಾರತದ ನೂತನ ಕೃಷಿ ತಿದ್ದುಪಡಿ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ಮಹತ್ವದ ಹೆಜ್ಜೆಯಾಗುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಮ್ಯುನಿಕೇಶನ್ಸ್ ನಿರ್ದೇಶಕ ಗೆರ್ರಿ ರೈಸ್ ವಾಷಿಂಗ್ಟನ್ನಲ್ಲಿ ಹೇಳಿದ್ದಾರೆ.ಹೊಸ ವ್ಯವಸ್ಥೆಯತ್ತ ಸಾಗುವಾಗ ಬಹಳಷ್ಟು ಬಾಧಿತರಾಗುವಂತಹ ಜನರ ಹಿತಾಸಕ್ತಿಗಳನ್ನೂ ರಕ್ಷಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಸುಧಾರಣೆಗಳಿಂದ ಬಾಧಿತರಾದವರಿಗೆ ಸೂಕ್ತ ಉದ್ಯೋಗಾವಕಾಶ ದೊರಕುವಂತೆ ಮಾಡುವುದು ಬಹಳ ಮುಖ್ಯ ಎಂದೂ ಪ್ರತಿಪಾದಿಸಿದ್ದಾರೆ. ದೆಹಲಿಯ ಗಡಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ನಾಯಕರು, ಹಾಗೂ ಕೇಂದ್ರದ ನಡುವೆ 9 ನೇ ಸುತ್ತಿನ ಮಾತುಕತೆಗಳು ಇಂದು ನಡೆಯಲಿರುವುದರಿಂದ ಈ ಹಿನ್ನೆಲೆಯಲ್ಲಿ ಐಎಂಎಫ್ ಹಿರಿಯ ಅಧಿಕಾರಿಯ ಹೇಳಿಕೆ ಮಹತ್ವ ಪಡೆದಿದೆ. ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂಬುದು ಪ್ರತಿಭನಾನಿರತ ರೈತರ ಆಗ್ರಹವಾಗಿದ್ದರೂ ಕೇಂದ್ರ ಸರಕಾರ ಮಾತ್ರ ಇದಕ್ಕೆ ಒಪ್ಪಿಲ್ಲ, ಬದಲು ಕೆಲವೊಂದು ತಿದ್ದುಪಡಿ ತರಲು ಮಾತ್ರ ಸಿದ್ಧ ಎಂದು ಹೇಳಿಕೊಂಡು ಬಂದಿದೆ , ಬಿಕ್ಕಟ್ಟು ಸಹ ಎಂದಿನಂತೆ ಮುಂದುವರೆದಿದೆ.