ಪ್ರತಿಯೊಬ್ಬರು ಯೋಗವನ್ನು ಮೈಗೂಡಿಸಿಕೊಳ್ಳಿ: ಮಠಪತಿ
ಮೂಡಲಗಿ 22: ಇಂದಿನ ಯುವ ಪೀಳಿಗೆ ಜಂಕ ಆಹಾರ ಸೇವಿಸುವುದರಿಂದ ಅಡುಗೆಯ ಮನೆಯಲ್ಲಿ ಮಾತ್ರೆಗಳ ಖಜಾನೆಯಾಗಿದೆ, ಯೋಗ ಮಾಡುವದರಿಂದ ದೇಹದಲ್ಲಿ ಇರತಕ್ಕಂತಹ ರೋಗಗಳನ್ನು ಸ್ವಚ್ಛ ಮಾಡಲು ಸಹಕಾರಿಯಾಗುತ್ತದೆ ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಪ್ರೊ. ಆಯ್.ಆರ್. ಮಠಪತಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಹಾಗೂ ತಾಲೂಕಾ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ, ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಲಯನ್ಸ ಪರಿವಾರ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಹವಿದ್ಯಾಲಯದ ಆವರಣದಲ್ಲಿ ಜರುಗಿದ ಅಂತರರಾಷ್ಟ್ರೀಯ 8ನೇ ಯೋಗಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಿರಾರು ವರ್ಷಗಳ ಹಿಂದೆ ಭಾರತ ಎಲ್ಲಾ ದೇಶಗಳಿಗೆ ಯೋಗವನ್ನು ಕೊಟ್ಟ ಯೋಗ ಪತಂಜಲಿ ಮಹರ್ಷಿಗಳನ್ನು ಈ ಸಂದರ್ಭದಲ್ಲಿ ನೆನೆಯಬೇಕು, ಯೋಗವನ್ನು ವಿಶ್ವವ್ಯಾಪ್ತಿಯಾಗಿ ಪ್ರಚಾರ ಪಡೆಯಲು ಭಾರತ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಕಾರಣ ಎಂದರು. ಪ್ರತಿಯೊಬ್ಬರು ಯೋಗವನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬೇಕೆಂದರು.
ಪತಂಜಲಿ ಮಹರ್ಷಿಗಳು ತಮ್ಮ ಬದುಕಿನಲ್ಲಿ ಯೋಗವನ್ನು ಅನುಸಂಧಾನ ಮಾಡಿ ಸತ್ಯವಾದಂತಹ ಸಂಗತಿಗಳನೇ ಎಲ್ಲರಿಗೂ ತಿಳಿಸಿಕೊಡಬೇಕು ಎಂಬ ದೃಷ್ಠಿಯಿಂದ ಅಷ್ಟಾಂಗ ಯೋಗವನ್ನು ಆರಂಭ ಮಾಡಿದರು, ಅಷ್ಟಾಂಗ ಯೋಗದಲ್ಲಿ ಎರಡು ವಿಭಾಗ ಮಾಡಿ ಮೊದಲನೇಯದಾಗಿ ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ ಮತ್ತು ಇನ್ನೊಂದು ಧ್ಯಾನ, ದಾರಣ ಮತ್ತು ಸಮಾಧಿ, ಐದು ಮೊದಲನೇ ಅಂಗಗಳು ಬಹಿರಂಗದ ದೇಹವನ್ನು ಶುದ್ಧಿಕರಣ ಮಾಡಿ ಸ್ವತ್ಥ ಸಮಾಜದಲ್ಲಿ ಸ್ವಸ್ಥವಾಗಿ ಇರಲ್ಲಿಕೆ ಸಹಕಾರಿಯಾದರೆ ಧ್ಯಾನ, ಧಾರಣ, ಸಮಾಧಿ ಅಂತರಂಗದ ವಿಕಸನಕ್ಕೆ ಪೂರಕವಾಗಿವೆ ಎಂದರು.
ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ವಿಶಾಲ ನಿಂಬಾಳ್ಕರ ಅವರು ವಿಶೇಷವಾದ ಯೋಗ ಪ್ರದರ್ಶನವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ.ಎ.ಸೋನವಾಲಕರ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿಎಸ್ಐ ಎಚ್.ವಾಯ್.ಬಾಲದಂಡಿ ಇದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ.ಶಾಸ್ತ್ರೀಮಠ ಸ್ವಾಗತಿಸಿದರು, ಪ್ರೊ.ಎಸ್.ಎಲ್.ಚಿತ್ರಗಾರ ನಿರೂಪಿಸಿದರು.