ಅಫಘಾನಿಸ್ತಾನದಿಂದ ಆಸ್ಟ್ರೇಲಿಯಾ ನಾಗರಿಕರ ತೆರವು ಆರಂಭ
ಮಾಸ್ಕೋ, ಆಗಸ್ಟ್ 18: ತಾಲಿಬಾನ್ ವಶದಲ್ಲಿರುವ ಅಫಘಾನಿಸ್ತಾನದಿಂದ ತಮ್ಮ ನಾಗರಿಕರನ್ನು ತೆರವುಗೊಳಿಸುವ ಕಾರ್ಯದಲ್ಲಿ ಹಲವು ದೇಶಗಳು ನಿರತವಾಗಿದ್ದು, ಇದೀಗ ಆಸ್ಟ್ರೇಲಿಯಾ ಕೂಡ ತನ್ನ ನಾಗರಿಕರ ಸ್ಥಳಾಂತರ ಆರಂಭಿಸಿದೆ.
ಅಫಘಾನ್ ರಾಜಧಾನಿ ಕಾಬೂಲ್ ನಿಂದ ಮೊದಲ ಹಂತದಲ್ಲಿ 26 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಬುಧವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಆಸ್ಟ್ರೇಲಿಯಾದ ಪ್ರಧಾನಮಂತ್ರಿ, ಕಾಬೂಲ್ ನಿಂದ ದೇಶದ ಮೊದಲ ರಕ್ಷಣಾ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ನ ಸೇನಾ ನೆಲೆಯಲ್ಲಿ ಈಗಾಗಲೇ ಆಗಮಿಸಿದ್ದು, "ಆ ವಿಮಾನದಲ್ಲಿ 26 ಜನರಿದ್ದರು. ಅದರಲ್ಲಿ ಆಸ್ಟ್ರೇಲಿಯಾದ ನಾಗರಿಕರು, ವೀಸಾ ಹೊಂದಿರುವ ಅಫ್ಘಾನ್ ಪ್ರಜೆಗಳು ಮತ್ತು ಅಂತಾರಾಷ್ಟ್ರೀಯ ರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವಿದೇಶಿ ಅಧಿಕಾರಿ ಇದ್ದರು" ಎಂದು ಹೇಳಿದ್ದಾರೆ.
ಕಾಬೂಲ್‌ನಿಂದ ಆಗಮಿಸುವ ಅಥವಾ ನಿರ್ಗಮಿಸುವ ಎಲ್ಲ ದೇಶಗಳ ಎಲ್ಲಾ ವಿಮಾನಗಳ ಬಳಕೆಯನ್ನು ಗರಿಷ್ಠಗೊಳಿಸಲು ಆಸ್ಟ್ರೇಲಿಯಾ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರ ದೇಶಗಳೊಂದಿಗೆ ಸಹಕರಿಸುತ್ತಿದೆ ಎಂದಿದ್ದಾರೆ. ಆಸ್ಟ್ರೇಲಿಯಾದ ಬ್ರಾಡ್‌ಕಾಸ್ಟರ್ ಎಬಿಸಿ ಕ್ಯಾನ್‌ಬೆರಾ ಕಾಬೂಲ್‌ನಿಂದ ಸುಮಾರು 600 ಜನರನ್ನು ಸ್ಥಳಾಂತರಿಸಲು ಯೋಜಿಸಿದೆ ಎಂದು ವರದಿ ಮಾಡಿದೆ, ಇದರಲ್ಲಿ 100 ಆಸ್ಟ್ರೇಲಿಯನ್ನರು ಮತ್ತು ಅವರ ಅದೇ ಸಂಖ್ಯೆಯ ಸಂಬಂಧಿಕರು, ಹಾಗೂ 300 ರಿಂದ 400 ಅಫ್ಘನ್‌ಗಳು ಸೇರಿದ್ದಾರೆ. ಭಾನುವಾರ, ಅಮೆರಿಕ ಪಡೆಗಳು ತಮ್ಮ ವಾಪಸಾತಿಯನ್ನು ಮುಗಿಸಲು ಹತ್ತಿರವಾಗುತ್ತಿದ್ದಂತೆ, ತಾಲಿಬಾನ್ಗಳು ಕಾಬೂಲ್ ಪ್ರವೇಶಿಸುವ ಮೂಲಕ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡವು, ಇದು ಅಮೆರಿಕ ಬೆಂಬಲಿತ ನಾಗರಿಕ ಸರ್ಕಾರದ ಪತನಕ್ಕೆ ಕಾರಣವಾಯಿತು.
ಹೀಗಾಗಿ ಮುಂದಾಗಬಹುದಾದ ಈ ಬೆಳವಣಿಗೆಯ ಬಗ್ಗೆ, ಪ್ರತೀಕಾರದ ಭಯದಿಂದ ಅನೇಕ ಜನರು ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ.