ಹಿರಿಯರು ಕುಟುಂಬದ ಅನುಭವಗಳ ವಿಶ್ವವಿದ್ಯಾಲಯ : ಬಿಕೆ ಡಾ.ಜ್ಞಾನಜ್ಯೋತಿ
ಲೋಕದರ್ಶನ ವರದಿ
ಹಾರೂಗೇರಿ : ಹಿರಿಯ ನಾಗರಿಕರು ಪ್ರತಿ ಕುಟುಂಬದ ಅನುಭವಗಳ ವಿಶ್ವವಿದ್ಯಾಲಯವಿದ್ದಂತೆ. ಸಂಸ್ಕಾರ, ಸಂಸ್ಕೃತಿಯ ಇತಿಹಾಸವನ್ನು ತಿಳಿಯಬೇಕಾದಲ್ಲಿ ಮನೆಯ ಹಿರಿಯ ಜೀವಿಗಳಿಂದ ಮಾತ್ರ ಸಾಧ್ಯವಿದೆ ಎಂದು ಬ್ರಹ್ಮಾಕುಮಾರಿ ಡಾ.ಜ್ಞಾನಜ್ಯೋತಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹಿರಿಯರ ಪ್ರೀತಿ ಮತ್ತು ಶುಭ ಭಾವನೆ ತುಂಬಿದ ಆಶೀರ್ವಾದ ಯುವಪೀಳಿಗೆಗೆ ಅಗತ್ಯವಾಗಿದೆ. ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಸಂಸ್ಕಾರ, ಮಾನವೀಯತೆ ಕಲಿಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದು, ಆತ್ಮಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಹಿರಿಯರ ಅನುಭವಯುಕ್ತ ಮಾತುಗಳನ್ನು ಕೇಳುವುದು ಅವರ ಭಾವನೆಯನ್ನು ಗೌರವಿಸುವುದು ಅವರಿಗೆ ಪ್ರೀತಿ ಮತ್ತು ಸಮಯ ನೀಡುವುದು ಆದ್ಯ ಕರ್ತವ್ಯ ಎಂದರು.
ಆಧಾರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಮಾತನಾಡಿ ದೇಹದ ವಯಸ್ಸು ಕಾಣಬಹುದು ಆದರೆ ಮನಸ್ಸು ಸದಾ ಚೇತನವಾಗಿರಲು ಸ್ಫೂರ್ತಿಯಿಂದ ಜೀವನವನ್ನು ಉಲ್ಲಾಸದಿಂದಿಟ್ಟುಕೊಳ್ಳಬೇಕು. ಸಹನೆ, ತಾಳ್ಮೆಯ ಅಗತ್ಯವಿದೆ. ಕಾಲಕ್ಕೆ ತಕ್ಕಂತೆ ಬದಲಾಗಿ ಹೊಂದಾಣಿಕೆ ಮಾಡಿಕೊಂಡಾಗ ಮಾತ್ರ ಬದುಕನ್ನು ಆನಂದಿಸಲು ಸಾಧ್ಯವಿದೆ ಎಂದರು.
ರಾಜಯೋಗಿನಿ ಬಿಕೆ ಶಿವಾನಿ ಅಕ್ಕನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಹಿರಿಯರು ವೃದ್ಧರಲ್ಲ, ಅನುಭವಿ ಸಂಪನ್ನರು. ತಮ್ಮ ಜೀವನದ ಶ್ರಮದ ದಿನಗಳನ್ನು ಕಳೆದಿದ್ದು, ಇಂದು ಸ್ವಯಂ ಉನ್ನತಿಗಾಗಿ ಆತ್ಮಜ್ಞಾನ ಪಡೆದು ಮನಸ್ಸು ಸಬಲೀಕರಣಗೊಳ್ಳಲು ಧ್ಯಾನದ ಅಗತ್ಯವಿದೆ ಎಂದರು.
ಪ್ರಜಾಪಿತ ಬ್ರಹ್ಮಾಕುಮಾರ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ವೈದ್ಯಾಧಿಕಾರಿ ಡಾ.ಭೀಮಸೇನ ಬೀಳಗಿ, ದೈಹಿಕ ಶಿಕ್ಷಕ ಅಪ್ಪಾಸಾಹೇಬ ಆಲಗೂರ, ಲೇಖಕ ಬಾಲಕೃಷ್ಣ ಜಂಬಗಿ, ರಾಜಯೋಗಿನಿ ಬಿಕೆ ಪಾರ್ವತಿ, ರಾಯಪ್ಪ ಲುಡಬುಡೆ, ದೊಡ್ಡಪ್ಪ ಚಾಳೇಕರ, ಶಿವಪುತ್ರ ಹುಕ್ಕೇರಿ, ಸಿದ್ರಾಯ ಕುರಬೆಟ್ಟ, ಮಹಾವೀರ ಚಾಳೇಕರ, ಎಸ್.ಎಲ್.ಕಟ್ಟಿ ಹಾಗೂ ಬ್ರಹ್ಮಾಕುಮಾರಿಯರು ಉಪಸ್ಥಿತರಿದ್ದರು.
ಜನೇವಾ ಚಾಳೇಕರ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.