ಹೂವಿನ ಹಡಗಲಿ

ವರದಕ್ಷಿಣೆ ಕಿರುಕುಳ: ಬಸ್ ಕಂಡಕ್ಟರ್‌ಗೆ ಆರು ತಿಂಗಳು ಜೈಲು ಶಿಕ್ಷೆ

ವರದಕ್ಷಿಣೆ ಕಿರುಕುಳ: ಬಸ್ ಕಂಡಕ್ಟರ್‌ಗೆ ಆರು ತಿಂಗಳು ಜೈಲು ಶಿಕ್ಷೆ

ಹೂವಿನಹಡಗಲಿ 28: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಬಸ್ ಕಂಡಕ್ಟರ್ ಗೆ ಆರು ತಿಂಗಳು ಜೈಲು, ರೂ. 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.   

ಮೊದಲ ಪತ್ನಿಯನ್ನು ದೂರವಾಗಿಸಿ, ಎರಡನೇ ಮದುವೆಯಾದ ಕೊಮಾರನಹಳ್ಳಿ ತಾಂಡಾದ ಆರೋಪಿ, ರಾಣೆಬೆನ್ನೂರು ಸಾರಿಗೆ ಘಟಕದಲ್ಲಿ ಆರೋಪಿ ರವಿ ನಾಯ್ಕ ಕಂಡಕ್ಟರ್ ಕೆಲಸ ಮಾಡುತ್ತಿದ್ದಾನೆ.  ದಾಸರಹಳ್ಳಿ ತಾಂಡಾದ ಆಶಾಬಾಯಿಯನ್ನು 2010ರಲ್ಲಿ ಮದುವೆಯಾಗಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಯಿಂದ ದೂರವಾಗಿ ಸ್ವಗ್ರಾಮದಲ್ಲಿ ಎರಡನೇ ಮದುವೆಯಾಗಿದ್ದ. ಈ ಕುರಿತು ಮೊದಲ ಪತ್ನಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಟಿ.ಅಕ್ಷತಾ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ರವಿ ನಾಯ್ಕನಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ರೂ. 10 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಜೈಲು, ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಒಟ್ಟು ರೂ. 30 ಸಾವಿರ ದಂಡ ವಿಧಿಸಲಾಗಿದೆ.  

ಆರೋಪಿಯ ತಾಯಿ ಲಕ್ಷ್ಮಿಬಾಯಿಗೆ ರೂ. 20 ಸಾವಿರ ದಂಡ ತಪ್ಪಿದಲ್ಲಿ 3 ತಿಂಗಳು, ಜೈಲು, ಆರೋಪಿಯ ಸಹೋದರ ಲಾವಾನಾಯ್ಕ, 2ನೇ ಪತ್ನಿಯ ತಂದೆತಾಯಿಯಾದ ಮಂಗ್ಲನಾಯ್ಕ, ರೇವಣಿಬಾಯಿ ಅವರಿಗೆ ತಲಾ ರೂ. 500 ದಂಡ, ತಪ್ಪಿದಲ್ಲಿ 20 ದಿನ ಜೈಲು ಶಿಕ್ಷೆ ವಿಧಿಸಿದೆ. ದಂಡದ ಮೊತ್ತ ರೂ. 50 ಸಾವಿರ ಮೊದಲ ಪತ್ನಿ ಆಶಾಬಾಯಿಗೆ ಪರಿಹಾರ ನೀಡಲು ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ವಾದ ಮಂಡಿಸಿದ್ದರು. 


ಸುದ್ದಿ ಓದಿ