ಶಾಸಕ ಡಾ. ಚಂದ್ರು ಲಮಾಣಿ ಜನ್ಮದಿನ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ ವಿತರಣೆ
ಶಿರಹಟ್ಟಿ 01: ಮಕ್ಕಳಿಗೆ ವಿದ್ಯೆ ಜೊತೆಗೆ ವಿನಯ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯವಾಗಿದ್ದು, ನೀತಿವಂತರಾಗಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಗುರುವಾರ ಪಟ್ಟಣದ ಸಿಸಿ ನೂರಶೆಟ್ಟರ ಸರ್ಕಾರಿ ಪ್ರೌಡಶಾಲೆಯಲ್ಲಿ ಜನ್ಮದಿನದ ನಿಮಿತ್ಯ ಶಾಲಾ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣೆ ಮಾಡಿ ಮಾತನಾಡಿದರು.
ಕಡಿಮೆ ಅಂಕಗಳು ಬಂದರೆ ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ಒತ್ತಡ ಮತ್ತು ತೊಂದರೆ ತಗೆದುಕೊಳ್ಳಬಾರದು. ಆಸಕ್ತಿಗನುಗುಣವಾಗಿ ಅಭ್ಯಸಿಸುವದು ಸೂಕ್ತ, ಶಿಕ್ಷಕರು ಮಾಡುವ ಮಾರ್ಗದರ್ಶನದೊಂದಿಗೆ ಮುನ್ನೆಡೆಯಿರಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕಾಗಿ ಹಲವಾರು ಯೋಜನೆಗಳ ಮೂಲಕ ಸಾಕಷ್ಟು ರೂಗಳನ್ನು ವ್ಯಯಮಾಡುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಖಾಸಗಿ ಶಾಲೆಗಳನ್ನು ಮೀರಿಸುವಂತಹ ಸಾಧನೆ ಮಾಡಿದ ಸರ್ಕಾರಿ ಶಾಲೆಗಳ ವಿಧ್ಯಾರ್ಥಿಗಳ ಸಾಧನೆ ಅನನ್ಯವಾದದು ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಹುಟ್ಟುಹಬ್ಬಗಳಿಗೆ ವೃಥಾ ಹಣವನ್ನು ವ್ಯಯ ಮಾಡದೇ ಸಾಮಾಜಿಕ ಕಾರ್ಯಗಳನ್ನು ಮಾಡುವದರ ಮೂಲಕ ಜನ್ಮದಿನ ಆಚರಣೆ ಮಾಡಿದರೆ ಒಳಿತು. ಆದ್ದರಿಂದ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಶಿರಹಟ್ಟಿ ಮೀಸಲು ಮತಕ್ಷೇತ್ರ ತೀವ್ರವಾಗಿ ಹಿಂದುಳಿದಿದ್ದು, ಅದರ ಸಮಗ್ರ ಅಭಿವೃದ್ದಿಗೆ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಮುಖ್ಯವಾಗಿ ವಿಧಾನಸಭೆಯಲ್ಲಿ ನಮ್ಮ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಕ್ಕೆ ತಂದು ಸಭಾಧ್ಯಕ್ಷರ ಗಮನಸೆಳೆಯುತ್ತಿದ್ದು, ಸಂತೋಷಕರ ಸಂಗತಿ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಣೆ: ಜನ್ಮದಿನ ಅಂಗವಾಗಿ ಇದೇ ಸಂದರ್ಭದಲ್ಲಿ ಪಟ್ಟಣದ ತಾಲ್ಲೂಕಾ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಯಿತು.
ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ನಂದಾ ಪಲ್ಲೇದ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಫಕೀರೇಶ ರಟ್ಟಹಳ್ಳಿ, ಮುಖಂಡರಾದ ಜಾನು ಲಮಾಣಿ, ಅಕ್ಬರ ಯಾದಗಿರಿ, ಗೂಳಪ್ಪ ಕರಿಗಾರ, ಬಸವರಾಜ ತುಳಿ, ಮಹೇಶ ಕಲ್ಲಪ್ಪನವರ, ಎಚ್.ಎಮ್ ದೇವಗಿರಿ, ತಿಪ್ಪಣ್ಣ ಲಮಾಣಿ, ಸಂದೇಶ ಗಾಣಿಗೇರ. ಶಾಲೆಯ ಮುಖ್ಯ ಶಿಕ್ಷಕ ಗಣೇಶ ಈರಕ್ಕನವರ ಮತ್ತಿತರರು ಉಪಸ್ಥಿತರಿದ್ದರು.