ರೈಲ್ವೆಯಲ್ಲಿ ಬಸವ ಜಯಂತಿಯನ್ನು ‘ಕಾಯಕ ದಿನ’ವಾಗಿ ಆಚರಿಸಲು ಆಗ್ರಹ
ಬೈಲಹೊಂಗಲ, ಆ.7: ಜಗತ್ತಿಗೆ ಕಾಯಕ ತತ್ವ ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ರಾಜ್ಯದ ರೈಲ್ವೆ ಇಲಾಖೆಯಲ್ಲಿ ‘ಕಾಯಕ ದಿನವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಬೇಕೆಂದು ನೈಋತ್ಯ ರೈಲ್ವೆ ವಿಭಾಗದ ಡಿಆರ್ಯುಸಿಸಿ ನಿರ್ದೇಶಕ ಎಫ್.ಎಸ್. ಸಿದ್ದನಗೌಡ ಆಗ್ರಹಿಸಿದರು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ನಡೆದ 41ನೇ ಡಿಆರ್ಯುಸಿಸಿ ಸಭೆಯಲ್ಲಿ ಮಾತನಾಡಿದ ಅವರು, ಬಸವ ಜಯಂತಿಯನ್ನು ರೈಲ್ವೆ ಇಲಾಖೆಯಲ್ಲೂ ಅಧಿಕೃತವಾಗಿ ಆಚರಿಸುವ ಮೂಲಕ ಬಸವಣ್ಣನವರ ಕಾಯಕ ತತ್ವವನ್ನು ಸಿಬ್ಬಂದಿಯಲ್ಲಿ ಬಿತ್ತರಿಸಬೇಕು ಎಂದು ಒತ್ತಾಯಿಸಿದರು
ಸಭೆಯಲ್ಲಿ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು ಲೋಕಾಪುರ-ರಾಮದುರ್ಗಾ-ಸವದತ್ತಿ ಹೊಸ ರೈಲು ಮಾರ್ಗ ಸಮೀಕ್ಷೆ ಕೈಗೊಳ್ಳುವುದು, ಬೆಳಗಾವಿ-ಬೈಲಹೊಂಗಳ-ಸೊಗಲ-ಸವದತ್ತಿ ಮಾರ್ಗದ ಹೊಸ ರೈಲು ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಲಾಯಿತು