ಗ್ರಾ.ಪಂ ಸಿಬ್ಬಂದಿಯ ಕಿರುಕುಳ ನಿವಾರಿಸುವಂತೆ ಒತ್ತಾಯ

ಗ್ರಾ.ಪಂ ಸಿಬ್ಬಂದಿಯ ಕಿರುಕುಳ ನಿವಾರಿಸುವಂತೆ ಒತ್ತಾಯ Demand to end harassment by Gram Panchayat staff

ಲೋಕದರ್ಶನ ವರದಿ 

ಬೆಳಗಾವಿ, 01 : ಬೆನಕನಹಳ್ಳಿ ಗ್ರಾಮ ಪಂಚಾಯತಿ ಸಿಬ್ಬಂದಿಯ ಕಿರುಕುಳವನ್ನು ನಿವಾರಣೆ ಮಾಡುವಂತೆ ಗಣೇಶಪೂರದ ಬೀದಿ ಬದಿಯ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಮತ್ತು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.  

ಸೋಮವಾರ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿಯೊಂದನ್ನು ಸಲ್ಲಿಸಿ, ನಾವು ಸುಮಾರು 5 ವರ್ಷಗಳಿಂದ ಸದರಿ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದು, ಬೆನಕನಹಳ್ಳಿ ಗ್ರಾಮ ಪಂಚಾಯತಿ ಸಿಬ್ಬಂದಿಯಾದ ಯೋಗೇಶ ಈತನು ಪ್ರತಿದಿನ 10 ರೂಪಾಯಿಯಂತೆ ಭೂ ಬಾಡಿಗೆ ವಸೂಲಿ ಮಾಡಿಕೊಂಡು ಹೋಗುತ್ತಿದ್ದರು ಆದರೆ ಈಗ ಪ್ರತಿದಿನ 50 ರೂಪಾಯಿ ಭೂ ಬಾಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.  

ಅದಕ್ಕೆ ಪಂಚಾಯತಿ ರಶೀದಿಯನ್ನು ಕೂಡಾ ಕೊಡುವುದಿಲ್ಲ. 50 ರೂಪಾಯಿ ಕೊಡದಿದ್ದರೆ, ಪಂಚಾಯತಿಯಿಂದ ತಮಗೆ ನೋಟಿಸ ನೀಡುವುದಾಗಿ ಬೆದರಿಕೆ ಹಾಕುತ್ತಾರೆ. ಆದಕಾರಣ ಬಡ ಬೀದಿ ಬದಿ ವ್ಯಾಪಾರಿಗಳಾದ ನಾವು ಕೇವಲ ಸಂಜೆ ಹೊತ್ತು ಮಾತ್ರ ಇಲ್ಲಿ ವ್ಯಾಪಾರವನ್ನು ಮಾಡುತ್ತಿದ್ದು, ನಮ್ಮ ಈ ಸಮಸ್ಯೆಯನ್ನು ತಾವು ಪರಿಹರಿಸಿ ಮೊದಲಿನಂತೆ ಭೂ ಬಾಡಿಗೆ ಹಣವನ್ನು 10 ರೂಪಾಯಿ ಪಡೆಯುವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.