ಬೈಲಹೊಂಗಲ

ಬೈಲಹೊಂಗಲ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಬೈಲಹೊಂಗಲ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಬೈಲಹೊಂಗಲ, ಆ.6: ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಕಡಿಮೆ ಮಳೆಯ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೈಲಹೊಂಗಲ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹಾಂತೇಶ್ ಕಮತ ಆಗ್ರಹಿಸಿದರು.  

ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಬೆಳೆಗಳೂ ಮಳೆಯ ಕೊರತೆಯಿಂದ ಒಣಗಿ ಹೋಗುತ್ತಿವೆ.

ಸರ್ಕಾರ ಆಗಸ್ಟ್‌ 15ರವರೆಗೆ ಮಳೆಯ ಸ್ಥಿತಿಗತಿ ಪರೀಶೀಲಿಸಿ ಬರ ಘೋಷಣೆ ಮಾಡುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕನ್ನು ಸಹ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.  

ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣ ಪರಿಹಾರ ಧನ ಬಿಡುಗಡೆ ಮಾಡಬೇಕು. ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಬ್ಯಾಂಕುಗಳು ನೋಟಿಸ್ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

ಭಾರತೀಯ ಕೃಷಿಕ ಸಮಾಜದ ರಾಜ್ಯ ಸಂಚಾಲಕ ಎಫ್‌.ಎಸ್‌. ಸಿದ್ದನಗೌಡ ಮಾತನಾಡಿ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ರಸ್ತೆ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ ಅತಿಕ್ರಮಣ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಯ ಸಸಿಗಳು ಹಾಗೂ ಮರಗಳನ್ನು ಹಾನಿಗೊಳಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.  

ಕೇಂದ್ರ ಸರ್ಕಾರದ ಗ್ರಾಮಸಡಕ್ ಯೋಜನೆಯಡಿ ನಿರ್ಮಿಸಿರುವ ರಸ್ತೆ ಬದಿಗಳಲ್ಲಿಯೂ ಅತಿಕ್ರಮಣ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಈ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಂಕರ ಕುದರಿ, ಮಡಿವಾಳಪ್ಪ, ಬಸವರಾಜ ಬೆಳವಡಿ, ಸಂತೋಷ ರೇಣಕೆ, ಮಂಜು ಪತ್ತಾರ, ಜ್ಞಾನೇಶ್ವರ ಮಡಿವಾಳ, ಮುಗಬಸಪ್ಪ, ಸಂಗಪ್ಪ ಬಸಟ್ಟಿ, ವಿಠ್ಠಲ ಬೆಣ್ಣಿ, ಮಲ್ಲಿಕಾರ್ಜುನ ಜಳ್ಳಿ, ಬಸವರಾಜ ಕುದರಿ, ನಾಗಯ್ಯ ಪೂಜಾರ, ರಾಜು ಸಿಂಗಾರಗೊಪ್ಪ ಸೇರಿದಂತೆ ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ