ಹಾನಗಲ್

ಸೋಲು ಯಶಸ್ಸಿಗೆ ದಾರಿ ಮಾಡಿ ಕೊಡುತ್ತದೆ; ಶಾಸಕ ಮಾನೆ

ಸೋಲು ಯಶಸ್ಸಿಗೆ ದಾರಿ ಮಾಡಿ ಕೊಡುತ್ತದೆ; ಶಾಸಕ ಮಾನೆ

ಹಾನಗಲ್ 19: ಗೆಲುವು,ಯಶಸ್ಸಿನಲ್ಲಿ ಕಲಿಕೆ ಏನೂ ಇಲ್ಲ. ಆದರೆ ಸೋಲು, ವೈಫಲ್ಯ ಮಾತ್ರ ಸಾಕಷ್ಟು ಜೀವನಪಾಠ ಕಲಿಸುತ್ತದೆ. ಹಿನ್ನಡೆ ಆದರೆ ಆಲೋಚಿಸಲು ಆರಂಭಿಸುತ್ತೇವೆ. ಆಗ ಮಾತ್ರವೇ ನಮಗೆ ಯಶಸ್ಸಿನ ದಾರಿ, ಗೆಲುವಿನ ಮಂತ್ರ ಸಿಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ತಾಲೂಕಿನ ತಿಳವಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಮುಂದಿನ ಭವಿಷ್ಯವನ್ನು ವಿದ್ಯಾರ್ಥಿ ಜೀವನವೇ ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಪ್ರತಿಕ್ಷಣವನ್ನೂ ಸದ್ಭಳಕೆ ಮಾಡಿಕೊಳ್ಳಬೇಕಿದೆ. ತಂತ್ರಜ್ಞಾನವನ್ನು ಮನೋರಂಜನೆಗೆ ಮಾತ್ರ ಸೀಮಿತ ಮಾಡಿಕೊಳ್ಳದೇ ಅಧ್ಯಯನಕ್ಕೆ ಬಳಸಿಕೊಳ್ಳಬೇಕಿದೆ. ಜಗತ್ತಿನ ಆಗು, ಹೋಗುಗಳನ್ನು ಅರಿಯಬೇಕಿದೆ. ಜ್ಞಾನಾರ್ಜನೆ ಸರಿಯಾದರೆ ಉತ್ತಮ ಭವಿಷ್ಯ ಲಭಿಸಲಿದೆ. ಯಾವುದಕ್ಕೆ ಸಮಯ ಎಷ್ಟು ಕೊಡಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಸಮಯ ವ್ಯರ್ಥ ಮಾಡಿದರೆ ಸಾಧನೆ ಆಗದು. ನಿಶ್ಚಿತ ಗುರಿಯ ಕಡೆಗೆ ಮುನ್ನುಗ್ಗಿ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.  

ಹಾನಗಲ್ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ.ವಿಶ್ವನಾಥ ಬೋಂದಾಡೆ ಮಾತನಾಡಿ ಸಿಕ್ಕ ಅವಕಾಶ, ಸಮಯವನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸು ಸಾಧಿಸುವುದು ಜಾಣತನ. ವಿದ್ಯಾರ್ಥಿ ಜೀವನದಲ್ಲಿ ಸಮಯಹರಣ ಮಾಡಿದರೆ ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಜಾಗತಿಕ ಪೈಪೋಟಿ ಹೆಚ್ಚಿರುವ ಈ ಸಂದರ್ಭದಲ್ಲಿ ಸಾಮರ್ಥ್ಯ ನಿರೂಪಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು. 

ಪ್ರಾಚಾರ್ಯ ಸೀತಾಳದ ಎಸ್‌.ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಮಾಜಿ ಅಧ್ಯಕ್ಷ ಆರೀಫ್ ಲೋಹಾರ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಕೆಎಂಎಫ್ ನಿರ್ದೇಶಕ ಚಂದ್ರ​‍್ಪ ಜಾಲಗಾರ, ಶಿವಯೋಗಿ ಒಡೆಯರ, ಮಹ್ಮದ್‌ಫಾರೂಕ್ ಮೂಡಿ, ಬಸವರಾಜ ಒಬಣ್ಣನವರ, ಶೇಕಪ್ಪ ಬಮ್ಮನಹಳ್ಳಿ, ನಾಗರಾಜ ಭೈರೋಜಿ, ಸಮೀವುಲ್ಲಾ ಲೋಹಾರ, ರಾಜೂ ಶೇಷಗಿರಿ, ಗಣೇಶ ಹಳ್ಳೇರ, ಬಸವರಾಜ ಚವ್ಹಾಣ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ