ಅಫ್ಘಾನಿಸ್ತಾನದಲ್ಲಿ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು
ಕಂದಹಾರ್, ಜುಲೈ 16 : ಅಫ್ಘಾನಿಸ್ತಾನದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಸಿದ್ದಿಕಿ ಅಹ್ಮದ್ ಡ್ಯಾನಿಶ್ ಮೃತಪಟ್ಟಿದ್ದಾರೆ. ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಸಿದ್ದಿಕಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಾರ್ಯಾಲಯ ಶುಕ್ರವಾರ ತಿಳಿಸಿದೆ. ಸಿದ್ದಿಕಿ ಅವರ ಸಾವು ತೀವ್ರ ವಿಷಾಧಕರ ಎಂದು ರಾಯಭಾರಿ ಫರೀದ್ ಮಮುಂಡ್‌ಜಾಯ್ ನೋವು ವ್ಯಕ್ತಪಡಿಸಿದ್ದಾರೆ.
ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ರಾಯಿಟರ್ಸ್ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅವರ ಹಠಾತ್ ಸಾವಿನ ಬಗ್ಗೆ ಹಲವು ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಆಘಾತ ವ್ಯಕ್ತಪಡಿಸಿದ್ದಾರೆ. ಕೂದಲೆಳೆಯ ಅಂತರಲ್ಲಿ ಪ್ರಾಣಾಪಾಯದಿಂದ ಪಾರಾದೆ ಎಂದು ಟ್ವೀಟ್ ಮಾಡಿದ್ದ ಕೇವಲ ಮೂರು ದಿನಗಳಲ್ಲಿ ಅವರು ಸಾವನ್ನಪ್ಪಿರುವುದು ತೀವ್ರ ವಿಷಾದ ಮೂಡಿಸಿದೆ. ಸಿದ್ದಿಕಿ ಅವರು ಈ ಹಿಂದೆ ಕಳುಹಿಸಿದ್ದ ಲೇಖನಗಳು, ಹಂಚಿಕೊಂಡಿದ್ದ ಫೋಟೋಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.
ಡ್ಯಾನಿಶ್ ಸಿದ್ದಿಕಿ ಟಿವಿ ಮಾಧ್ಯಮದಲ್ಲಿ ವರದಿಗಾರನಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು. ನಂತರ ಫೋಟೊ ಜರ್ನಲಿಸ್ಟ್ ಆಗಿ ಬದಲಾಗಿದ್ದರು. ಅವರು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನೊಂದಿಗೆ ಫೋಟೋ ಜರ್ನಲಿಸ್ಟ್ ಆಗಿದ್ದರು. ಇಂಡಿಯಾ ಟುಡೆ ಗುಂಪಿನಲ್ಲಿ ಕೆಲ ಕಾಲ ವರದಿಗಾರರಾಗಿಯೂ ಕೆಲಸ ಮಾಡಿದ್ದರು.