ಜಿಲ್ಲೆಯಲ್ಲಿ ಪ್ರಸ್ತುತ 09 ವೃತ್ತಿ ನಿರತ ಮಹಿಳಾ ವಸತಿ ನಿಲಯಗಳು ಕಾರ್ಯ ನಿರ್ವಹಣೆ
ಮೂಡಲಗಿ 09: ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 09 ವೃತ್ತಿ ನಿರತ ಮಹಿಳಾ ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ. 121.40 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾಣಿ ಅವರು ರಾಜ್ಯ ಸಭೆಗೆ ಲಿಖಿತ ಉತ್ತರ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ರಾಜ್ಯ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ವೃತ್ತಿ ನಿರತ ಮಹಿಳಾ ವಸತಿ ನಿಲಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಹಿಳೆಯರಿಗೆ ಸುರಕ್ಷತೆ ಮತ್ತು ಅನುಕೂಲಕರ ಸ್ಥಳಗಳಲ್ಲಿ ವೃತ್ತಿ ನಿರತ ಮಹಿಳೆಯರಿಗೆ ಅವರ ಮಕ್ಕಳನ್ನು ಸಹ ನೋಡಿಕೊಳ್ಳುವ ಸೌಲಭ್ಯದೊಂದಿಗೆ ನಗರ ಮತ್ತು ಉಪನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶವಳಿವೆಯೋ ಅಂತಹ ಸ್ಥಳಗಳಲ್ಲಿ ಹೊಸದಾಗಿ ಅನುಮೋದನೆಗೊಂಡ ‘ಶಕ್ತಿ ಅಭಿಯಾನ’ ಯೋಜನೆಯಡಿ ‘ಸಖಿ’ ನಿವಾಸಗಳನ್ನು ಗುರುತಿಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಜ್ಯದಲ್ಲಿ 64 ವೃತ್ತಿ ನಿರತ ಮಹಿಳಾ ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ 29624 ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡಿದಿರುತ್ತಾರೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದರು ಮಾಹಿತಿ ಹಂಚಿಕೊಂಡರು.