ಕೋವಿಡ್-19: ಮಾಲ್ಡೀವ್ಸ್ ನಲ್ಲಿ ಆರೋಗ್ಯ ಕ್ರಮಗಳ ಜಾರಿಗೊಳಿಸಲು ಸೇನೆಗೆ ಅಧ್ಯಕ್ಷರ ಆದೇಶ
ಮಾಲೆ, ಮೇ 13 (ಕ್ಸಿನ್ಹುವಾ)- ಮಾಲ್ಡೀವ್ಸ್ ನಲ್ಲಿ ಕೋವಿಡ್ ಸೋಂಕಿನ ನಾಲ್ಕನೇ ಅಲೆಯನ್ನು ತಡೆಯಲು ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಭದ್ರತಾ ಪಡೆಎಗಳಿಗೆ ಅಧ್ಯಕ್ಷ ಇಬ್ರಾಹಿಂ ಸೋಲಿ ಆದೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ಇಲ್ಲಿ ವರದಿ ಮಾಡಿವೆ.
ಬುಧವಾರ ದೇಶವನ್ನುದ್ದೇಶಿಸಿ ಸರ್ಕಾರಿ ಟಿ ವಿ ವಾಹಿನಿಯಲ್ಲಿ ಮಾತನಾಡಿದ ಅಧ್ಯಕ್ಷ ಸೋಲಿ, ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ಕಡಿಮೆಗೊಳಿಸಲು ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ನಿಯಮಗಳನ್ನು ಪಾಲಿಸಲು ಸಹಕರಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಆರ್ಥಿಕ ಕುಸಿತದ ವಿಷಯದಲ್ಲಿ ಸಾಂಕ್ರಾಮಿಕ ರೋಗದಿಂದ ಹೆಚ್ಚು ಭಾದಿತವಾದ ದೇಶಗಳ ಪೈಕಿ ಮಾಲ್ಡೀವ್ಸ್ ಒಂದಾಗಿದೆ ಎಂದ ಸೋಲಿ, ಕೋವಿಡ್-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವುದನ್ನು ತಡೆಯಲು ಹೆಚ್ಚಿನ ಕಠಿಣ ನಿರ್ಬಂಧಗಳನ್ನು ಹೇರಲಾಗುವುದು. ಇದರಿಂದ ಆರ್ಥಿಕತೆಗೂ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಾಜಧಾನಿ ಮಾಲೆಯಲ್ಲಿ ಮುಂಜಾನೆ 4ರಿಂದ ಸಂಜೆ 4ಗಂಟೆವರೆಗೆ ಸದ್ಯ ಕರ್ಫ್ಯೂ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಪೊಲೀಸ್ ವಿಶೇಷ ಅನುಮತಿ ಹೊರತು ಪಡಿಸಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರಾರ್ಥನಾ ಕೂಟಗಳು ಮತ್ತು ಕುಳಿತು ಊಟ ಮಾಡುವ ಇತರ ಎಲ್ಲ ಉಪಹಾರ ಗೃಹಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಬುಧವಾರ 1,572 ಹೊಸ ಪ್ರಕರಣಗಳು ವರದಿಯಾಗಿದ್ದು, ಸದ್ಯ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 12,873 ಕ್ಕೆ ಏರಿದೆ. ಈ ಪೈಕಿ 263 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.