ಕೋವಿಡ್-19: ಕಾಮನ್‍ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಕಿಗಲಿ (ರುವಾಂಡ), ಮೇ 8: ಕೋವಿಡ್ -19 ಸಾಂಕ್ರಾಮಿಕ ರೋಗ ನಿರಂತರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ 26 ನೇ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯನ್ನು ಅನಿರ್ದಿಷ್ಟವಧಿಗೆ ಮುಂದೂಡಲ್ಪಟ್ಟಿದೆ ಎಂದು ಕಾಮನ್‌ವೆಲ್ತ್ ಒಕ್ಕೂಟ ಶುಕ್ರವಾರ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ದಿಂದಾಗಿ ಕಾಮನ್ ವೆಲ್ತ್ ನ ದ್ವೈವಾರ್ಷಿಕ ಸಭೆಯನ್ನು ಎರಡನೇ ಬಾರಿಗೆ ಮುಂದೂಡಲಾಗಿದೆ. ಕಳೆದ ವರ್ಷದ ಜೂನ್ ನಲ್ಲಿ ರುವಾಂಡಾದ ರಾಜಧಾನಿ ಕಿಗಲಿಯಲ್ಲಿ ಸಭೆಯನ್ನು ನಿಗದಿಪಡಿಸಲಾಗಿತ್ತು. ನಂತರ ಈವರ್ಷದ ಜೂನ್‌ಗೆ ಮುಂದೂಡಲಾಗಿತ್ತು.
‘ದೊಡ್ಡ ಸಭೆಗಳಿಂದ ಎಲ್ಲರಿಗೂ ಹೆಚ್ಚು ಅಪಾಯಗಳಾಗುವುದನ್ನು ಮನಗಂಡಿದ್ದೇವೆ. ಕೋವಿಡ್ ಸಾಂಕ್ರಾಮಿಕವು ಕಾಮನ್‍ವೆಲ್ತ್ ಒಕ್ಕೂಟ ರಾಷ್ಟ್ರಗಳ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಿದೆ ಎಂದು ಕಾಮನ್ ವೆಲ್ತ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪೆಟ್ರೀಷಿಯಾ ಸ್ಕಾಟ್ಲೆಂಡ್ ಹಾಗೂ ರುವಾಂಡಾದ ಅಧ್ಯಕ್ಷ ಪಾಲ್ ಕಗಾಮೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೂಕ್ತ ಸಮಯದಲ್ಲಿ ಕಾಮನ್‍ವೆಲ್ತ್ ಒಕ್ಕೂಟ ರಾಷ್ಟ್ರಗಳ ಮುಖ್ಯಸ್ಥರು ಕಿಗಲಿಗೆ ಬರುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಕಗಮೆ ಹೇಳಿದ್ದಾರೆ.