ತಾಲೂಕಿನ ಸರ್ವತೋಮುಖ ಪ್ರಗತಿಗೆ ಬದ್ಧ: ಬಾಲಚಂದ್ರ
ಮೂಡಲಗಿ 21: ಮೂಡಲಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಮೂಡಲಗಿ ತಾಲೂಕಿನ ಸರ್ವತೋಮುಖ ಪ್ರಗತಿಗೆ ಬದ್ಧರಿರುವುದಾಗಿ ತಿಳಿಸಿದ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಇನ್ನು ಕೆಲವೇ ದಿನಗಳಲ್ಲಿ ತಾಲೂಕಿನ ನಾಗರೀಕರ ಬಹು ದಿನಗಳ ಬೇಡಿಕೆಯಾಗಿದ್ದ ಉಪನೋಂದಣಾಧಿಕಾರಿಗಳ ಕಛೇರಿಯು ಪೂರ್ಣ ಪ್ರಮಾಣದಲ್ಲಿ ಕರ್ತವ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ರೇವಣಸಿದ್ಧೇಶ್ವರ ಗವಿಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಕ್ತರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಮೂಡಲಗಿ ತಾಲೂಕಿಗೆ ಡಿಸೆಂಬರ್ ತಿಂಗಳೊಳಗೆ ಬಾಕಿ ಉಳಿದಿರುವ ತಾಲೂಕಾ ಮಟ್ಟದ ಕಛೇರಿಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಇಲ್ಲಿಯ ರೇವಣಸಿದ್ಧೇಶ್ವರ ಗವಿಮಠ ಪುರಾತನವಾಗಿ ಸಾಕಷ್ಟು ಇತಿಹಾಸವನ್ನು ಹೊಂದಿದೆ. ಶಿವಬೋಧರಂಗ ಸಿದ್ಧ ಸಂಸ್ಥಾನ ಪೀಠದ ಮೂಲ ಪೀಠಾಧಿಪತಿಗಳು ರೇವಣಸಿದ್ಧೇಶ್ವರ ಅಣತಿ ಮೇರೆಗೆ ಮೂಡಲಗಿಯಲ್ಲಿ ನೆಲೆಯೂರಿದರೆಂದು ಇತಿಹಾಸದಿಂದ ತಿಳಿದುಬಂದಿದೆ. ಸಾಕಷ್ಟು ಪವಾಡಗಳು ಗವಿಮಠದಲ್ಲಿ ನಡೆದಿರುವುದು ಸಹ ಇತಿಹಾಸದ ಪುಟಗಳು ಹೇಳುತ್ತವೆ. ಗವಿಮಠದ ಸದ್ಬಕ್ತರ ಆಶಯದ ಮೇರೆಗೆ ಮುಖ್ಯರಸ್ತೆಯಿಂದ ಗವಿಮಠವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ರೇವಣಸಿದ್ಧೇಶ್ವರ ಗವಿಮಠದ ಪ್ರಗತಿಗಾಗಿಯೂ ಬದ್ಧರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶ್ರೀಮಠದ ಪರವಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವೇದಮೂರ್ತಿ ಶಂಕರಯ್ಯಾ ಹಿರೇಮಠ ಅವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡ ರವೀಂದ್ರ ಸೋನವಾಲ್ಕರ, ಚನ್ನಬಸಯ್ಯಾ ನಿರ್ವಾಣಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸದಸ್ಯ ಈರ್ಪ ಮುನ್ಯಾಳ, ಗೀರೀಶ ಢವಳೇಶ್ವರ, ಮಲ್ಲಿಕಾರ್ಜುನ ಢವಳೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.