ಕಸ ವಿಲೇವಾರಿಯಲ್ಲಿ ನಾಗರೀಕತೆ ಸೋತಿದೆ

ಕಸ ವಿಲೇವಾರಿಯಲ್ಲಿ ನಾಗರೀಕತೆ ಸೋತಿದೆ  Civilization has failed in garbage disposal

ಕಸ ವಿಲೇವಾರಿಯ ಪ್ರಶ್ನೆ ಇಂದಿನ ಕಾಲದಲ್ಲಿ ಕೇವಲ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ. ಅದು ಮಾನವ ಸಹಜ ಜವಾಬ್ದಾರಿಯುತ ಮತ್ತು ನಾಗರೀಕ ಸಂಸ್ಕೃತಿಯ ಪರೀಕ್ಷೆಯಾಗಿರುವ ಜಾಗತಿಕ ಸವಾಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲಿ ನಾವು ಹೊಸ ಎತ್ತರಗಳನ್ನು ತಲುಪುತ್ತಿರುವಾಗ, ಅತ್ಯಂತ ಸರಳವಾದ  “ಕಸವನ್ನು ಹೇಗೆ ನಿಭಾಯಿಸಬೇಕು?” ಎಂಬ ಪ್ರಶ್ನೆಗೆ ಮಾನವಕುಲ ಇನ್ನೂ ಸಮರ​‍್ಕ ಉತ್ತರ ನೀಡಲು ವಿಫಲವಾಗಿದೆ. ನಗರಗಳ ಜನಸಂಖ್ಯೆ ಹೆಚ್ಚಾದಂತೆ ಮಲಿನ್ಯವೂ ಹೆಚ್ಚುತ್ತಿದೆ; ಬಳಕೆದಾರಕೇಂದ್ರಿತ ಜೀವನಶೈಲಿ ವಿಸ್ತರಿಸಿದಂತೆ ಪ್ಲಾಸ್ಟಿಕ್, ಇಹಿವೇಸ್ಟ್‌, ವೈದ್ಯಕೀಯ ತ್ಯಾಜ್ಯ ಮತ್ತಿತರ ಕಸದ ಪ್ರಮಾಣ ಗಗನಕ್ಕೇರಿದ ಗುಡ್ಡಗಳಾಗಿವೆ. ಆದರೆ ಈ ಗಣನೀಯ ಪ್ರಮಾಣದ ಕಸವನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವ ಕುರಿತು ನಮ್ಮ ಕ್ರಮಗಳು ಅಸಮರ​‍್ಕವಾಗಿವೆ.. ಇದರಿಂದ ಒಂದು ಮೂಲಭೂತ ಸತ್ಯ ಹೊರಬರುತ್ತದೆ “ಕಸ ವಿಲೇವಾರಿಯಲ್ಲಿ ನಾವೊಂದು ನಾಗರೀಕ ಸಮಾಜವಾಗಿ ಸೋತಿದ್ದೇವೆ” 

ಜನರ ದೈನಂದಿನ ಜೀವನದಲ್ಲಿ ಶಿಸ್ತು ಮತ್ತು ಹೊಣೆಗಾರಿಕೆ ಇಲ್ಲದಿದ್ದರೆ, ಯಾವುದೇ ಅಭಿವೃದ್ಧಿ ಶಾಶ್ವತವಾಗುವುದಿಲ್ಲ. ನಾಗರೀಕತೆ ಎಂದರೆ ಕಟ್ಟಡಗಳು, ರಸ್ತೆಗಳು, ಸಂವಹನ ತಂತ್ರಜ್ಞಾನ, ಮೌಲ್ಯಯುತ ಸೇವೆಗಳು ಮಾತ್ರವಲ್ಲ; ಅದು ವ್ಯಕ್ತಿಯ ನಡವಳಿ, ಸಾರ್ವಜನಿಕ ಸ್ಥಳಗಳ ಗೌರವ, ಮತ್ತು ಹಂಚಿಕೆಯ ಸಾರ್ವಜನಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿಯೂ ಅಡಕವಾಗಿದೆ. ಕಸವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕದೇ ರಸ್ತೆಯ ಬದಿಯಲ್ಲಿ ಬಿಸಾಕುವುದು, ವಾಹನದ ಕಿಟಕಿ ಮೂಲಕ ಕಾಗದ ಅಥವಾ ಪ್ಲಾಸ್ಟಿಕ್ ಎಸೆಯುವುದು, ಮನೆ ಕಸದೊಂದಿಗೆ ವೈದ್ಯಕೀಯ ತ್ಯಾಜ್ಯ ಬೆರೆಸುವುದು ಇವೆಲ್ಲವೂ ನಾಗರೀಕತಾ ಸಂಕೇತಗಳ ವಿರುದ್ಧದ ನಡೆಯಾಗುತ್ತದೆ. ಪ್ರಾಥಮಿಕ ಶಿಸ್ತು ಇಲ್ಲದಿದ್ದರೆ, ಯಾವುದೇ ವ್ಯವಸ್ಥೆಯೂ ಕಾರ್ಯಗತವಾಗುವುದಿಲ್ಲ. ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ನಗರೀಕರಣ ವೇಗವೇಗವಾಗಿ ಬೆಳೆಯುತ್ತಿದೆ. ಆದರೆ ಈ ವಿಸ್ತರಣೆ “ಸ್ಮಾರ್ಟ್‌ ಪ್ಲ್ಯಾನಿಂಗ್‌”ಗೆ ಒಳಪಟ್ಟಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಸಮರ​‍್ಕ ಕಸ ಸಂಗ್ರಹ ಕೇಂದ್ರಗಳು, ಕಸ ವಿಂಗಡಣೆ ಘಟಕಗಳು, ಪುನರ್‌ಚಕ್ರಣ ಸೌಲಭ್ಯಗಳು, ಮತ್ತು ಸ್ವಚ್ಛತೆ ಸಿಬ್ಬಂದಿ ಪ್ರಮಾಣ ತಕ್ಕಮಟ್ಟಿಗೆ ಹೆಚ್ಚಿಲ್ಲ. ಪರಿಣಾಮ ನಗರ ಹೊರವಲಯದಲ್ಲಿ ಹೊಸ “ಕಸ ಪರ್ವತಗಳು” ಏರುತ್ತಿವೆ, ಹೀಗಾಗಿ ಹಾನಿಕಾರಕ ರಾಸಾಯನಿಕಗಳು ಮಣ್ಣಿನೊಳಗೆ ಸೇರುತ್ತಿವೆ, ನೀರಿನ ಮೂಲಗಳು ವಿಷಗೊಳ್ಳುತ್ತಿವೆ, ಗಾಳಿಯಲ್ಲಿ ದುರ್ವಾಸನೆ, ಹಾನಿಕಾರಕ ಅನಿಲಗಳ ಪ್ರಮಾಣ ಹೆಚ್ಚುತ್ತಿದೆ . 

ಈ ರೀತಿಯ ನಗರ ವಿಸ್ತರಣೆ ನಮ್ಮ ಯೋಜನೆಗಳ ದೌರ್ಬಲ್ಯವನ್ನೂ, ನಿರ್ವಹಣಾ ಕ್ರಮಗಳ ಸೋಲನ್ನೂ ಸ್ಪಷ್ಟಪಡಿಸುತ್ತದೆ. ಪ್ಲಾಸ್ಟಿಕ್‌ನ ಅತಿವ್ಯಾಪ್ತಿ ನಮ್ಮ ಕಾಲದ ದೊಡ್ಡ ವಿಪತ್ತು ಪ್ಲಾಸ್ಟಿಕ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬಂದಿದೆ. ಅದಕ್ಕೆ ಕಾರಣಗಳು ಅಗ್ಗದ ಬೆಲೆ, ಸುಲಭ ಲಭ್ಯತೆಯಾಗಿದೆ.ಪ್ರತಿ ಮನೆ, ಕಚೇರಿ, ಅಂಗಡಿ, ಮಾರುಕಟ್ಟೆಶ್ರಿಎಲ್ಲವೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಅನಿವಾರ್ಯವಾಗಿ ಉತ್ಪಾದಿಸುತ್ತಿವೆ. ಆದರೆ ಅದರ ಸಂಗ್ರಹಣೆ, ಪುನರ್‌ಚಕ್ರಣ ಮತ್ತು ಮರುಬಳಕೆಗೆ ಅಗತ್ಯವಿರುವ ವ್ಯವಸ್ಥೆಗಳು ತುಂಬಾ ಕಡಿಮೆ. ಪುನರ್‌ಚಕ್ರಣಕ್ಕೆ ಅನುವಾಗುವ ಪ್ಲಾಸ್ಟಿಕ್‌ಗಿಂತ “ನಾನ್‌ಹಿರಿಸೈಕ್ಲೆಬಲ್‌” ಪ್ಲಾಸ್ಟಿಕ್ ಪ್ರಮಾಣ ಹೆಚ್ಚು. ಈ ಪ್ಲಾಸ್ಟಿಕ್ ಮಣ್ಣು, ನದಿ, ಸಮುದ್ರ ಎಲ್ಲೆಡೆ ಸೇರುತ್ತಿದೆ. ಸಮುದ್ರದ ಜೀವಿಗಳು, ಹಕ್ಕಿಗಳು, ಜಲಚರಗಳು ಇವುಗಳ ಜೀವ ಚಕ್ರವೇ ಅಸ್ಥವ್ಯಸ್ಥವಾಗುತ್ತಿದೆ. ಇದು ಒಂದು ಪರಿಸರಾತ್ಮಕ ದುರಂತವಷ್ಟೇ ಅಲ್ಲ, ನಾಗರೀಕ ಸಮಾಜದ ನಿರ್ಲಕ್ಷ್ಯದ ಪ್ರತಿಬಿಂಬವೂ ಹೌದು.ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗುತ್ತಿರುವ ತ್ಯಾಜ್ಯ ಸಂಸ್ಕೃತಿ, ಒಂದೊಮ್ಮೆ ಗ್ರಾಮೀಣ ಪ್ರದೇಶಗಳು ಪರಿಸರ ಸ್ನೇಹಿ ಜೀವನ ಶೈಲಿಗೆ ಪ್ರಸಿದ್ಧವಾಗಿದ್ದವು. ಆದರೆ ಈಗ ಗ್ರಾಮಗಳಲ್ಲಿಯೂ ಪ್ಲಾಸ್ಟಿಕ್, ರಾಸಾಯನಿಕ ಪ್ಯಾಕೇಜಿಂಗ್, ಬಾಟಲಿ, ಸ್ಯಾಚೆಟ್ ತ್ಯಾಜ್ಯಗಳು ಹೆಚ್ಚಾಗಿವೆ. ಜೈವಿಕ ಮತ್ತು ಅಜೈವಿಕ ತ್ಯಾಜ್ಯಗಳ ಮಿಶ್ರಣದಿಂದ ಗ್ರಾಮಗಳ ಪರಿಸರ ಕೂಡಾ ಹಾನಿಗೊಳಗಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಕಸ ಸಂಗ್ರಹಣೆಗೆ ನಿರ್ದಿಷ್ಟ ವ್ಯವಸ್ಥೆಗಳು ಇಲ್ಲ; ಜನರು ಕಸವನ್ನು ಹೊಲ, ನದಿ, ಹಳ್ಳ ಹತ್ತಿರ ಎಸೆಯುತ್ತಾರೆ. ಇದರ ಪರಿಣಾಮವಾಗಿ ಮೃಗಗಳಿಗೆ, ಬೆಳೆಗಳಿಗೆ ಮತ್ತು ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತಿದೆ. ಈ ಬದಲಾವಣೆ ಕೂಡಾ ನಮ್ಮ ನಾಗರೀಕತೆಯ ಸೋಲಿನ ಇನ್ನೊಂದು ಮುಖವೆನ್ನಬಹುದು.  

ನಮ್ಮಲ್ಲಿ ಕಸದ ವಿಂಗಡಣೆ ಆರಂಭದಲ್ಲೇ ದೋಷಪೂರ್ಣವಾದ ಕ್ರಮವಾಗಿದೆ ಎನ್ನಬಹುದು. ಕಸ ವಿಲೇವಾರಿಯ ಮೂಲಾಧಾರವೇ ವಿಂಗಡಣೆ ಜೈವಿಕ, ಅಜೈವಿಕ, ಅಪಾಯಕಾರಿ, ಪುನರ್‌ಚಕ್ರಣ ಹೀಗೆ ವಿಂಗಡಣೆಯ ಅರಿವು ಜನಸಾಮಾನ್ಯರಲ್ಲಿ ಕಡಿಮೆ ಇದೆ. ಕೆಲವು ನಗರಗಳಲ್ಲಿ “ವೇಟುಹಿಡ್ರೈ” ಕಸದ ವಿಂಗಡಣೆಗೆ ನಿಯಮವಿದ್ದರೂ, ಜನಪಾಲನೆಯ ಕೊರತೆಯಿಂದ ಅದು ಕಾರ್ಯಗತವಾಗುವುದಿಲ್ಲ. ಕಸ ಸಂಗ್ರಹಣೆಯ ವಾಹನಗಳಿಗೆ ತಲುಪುವ ವೇಳೆಗೆ ಎಲ್ಲ ಕಸ ಬೆರೆತು ಹೋಗುತ್ತದೆ. ಇದರಿಂದ ಬೃಹತ್ ಪ್ರಮಾಣದ ಕಸ ಮೌಲ್ಯಯುತ ಸಂಪನ್ಮೂಲವಾಗುವ ಅವಕಾಶ ಕಳೆದುಹೋಗುತ್ತದೆ.ಕಸ ವಿಂಗಡಿಸುವಲ್ಲಿ ಜನರು, ಮನೆಗಳು, ಮಾರುಕಟ್ಟೆಗಳು, ಉದ್ಯಮಗಳು ಎಲ್ಲರೂ ವಿಫಲವಾಗಿರುವುದು ನಾಗರೀಕ ಅರಿವಿನ ಕೊರತೆಯ ಸ್ಪಷ್ಟ ಉದಾಹರಣೆ. ಆಡಳಿತದ ನೀತಿ-ನಿಯಮಗಳಿದ್ದರೂ ಅನುಷ್ಠಾನವಿಲ್ಲದಿರುವುದು ಖೇದದ ಸಂಗತಿಯಾಗಿದೆ. ಒಂದು ಕಡೆ ಸರ್ಕಾರಗಳು ಸ್ವಚ್ಛತೆಯ ಕುರಿತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಆದರೆ ಅವನ್ನು ಜಾರಿಗೆ ತರಲು ಬೇಕಾದ ಮೂಲಸೌಕರ್ಯ, ಸಿಬ್ಬಂದಿ, ಯಂತ್ರೋಪಕರಣ, ವೀಕ್ಷಣೆ ವ್ಯವಸ್ಥೆ ಸಾಲದಿರುವುದರಿಂದ ಕೊರತೆಯಾಗಿವೆ.ಕಸ ಸಂಗ್ರಹಣೆ ವಾಹನಗಳ ಪ್ರಮಾಣ, ವಿಂಗಡಣೆ ಘಟಕಗಳ ಸಾಮರ್ಥ್ಯ, ಪುನರ್‌ಚಕ್ರಣ ಘಟಕಗಳ ಸಂಖ್ಯೆ ಇವೆಲ್ಲವೂ ಅಗತ್ಯಕ್ಕಿಂತ ಹೆಚ್ಚಾಗಬೇಕಿದೆ. ಕಸದ ಆರ್ಥಿಕತೆ ಮೌಲ್ಯವನ್ನು ಸಮಾಜ ಗುರುತಿಸಲು ವಿಫಲವಾಗಿದೆ. ಕಸ ಎಂದರೆ ಕೇವಲ ತ್ಯಾಜ್ಯವಲ್ಲ ಅದು ಮೌಲ್ಯಯುತ ಸಂಪನ್ಮೂಲ. ಜೈವಿಕ ತ್ಯಾಜ್ಯದಿಂದ ಗೊಬ್ಬರ, ಬಯೋಗ್ಯಾಸ, ವಿದ್ಯುತ್ ತಯಾರಿಸಬಹುದಾಗಿದೆ. 

ಅದರಂತೆ ಅಜೈವಿಕ ತ್ಯಾಜ್ಯದಿಂದ ಹೊಸ ಉತ್ಪನ್ನಗಳು, ಮರುಬಳಕೆ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಉದ್ಯೋಗಾವಕಾಶಗಳು ತೆರೆಯುತ್ತವೆ. ಆದರೆ ಈ ಆರ್ಥಿಕತೆಯತ್ತ ಸಮಾಜವು ಇನ್ನೂ ಯೋಚನೆ ಮಾಡಿಲ್ಲ. ಅನೇಕ ದೇಶಗಳು ಕಸದ ಮೌಲ್ಯದಿಂದ ಆರ್ಥಿಕ ಲಾಭಗಳಿಸುತ್ತಿರುವಾಗ, ನಮ್ಮಲ್ಲಿ ಕಸ ನಾಶಗೊಳಿಸುವ ಭಾರವೇ ಹೆಚ್ಚಾಗಿದೆ.  

ಸಂಪನ್ಮೂಲಗಳ ಮೌಲ್ಯವನ್ನು ಅರಿಯದ ಸಮಾಜವು ಕಾಲಕ್ರಮೇಣ ಹಾಳಾದ ಮೂಲಸಂಪನ್ಮೂಲಗಳ ಹೊರೆ ಹೊರಬೇಕಾದ ಪರಿಸ್ಥತಿ ಬಂದೊದಗಿದ್ದು,  ಮಲಿನ್ಯವು ಮಾನವ ಜೀವಕ್ಕೆ ಅಪಾಯವಾಗುತ್ತಿದೆ. ಕಸ ಸರಿಯಾಗಿ ವಿಲೇವಾರಿಯಾಗದೆ ಇದ್ದರೆ ಅದು ಕೀಟ, ಸೋಂಕು ಹರಡುವ ನರಿಗಳು, ನಾಯಿ, ಹಂದಿಗಳ ಅವಾಸಸ್ಥಳವಾಗುತ್ತದೆ, ಕಸ ನೀರು ಬೆರೆತು ಕುಡಿಯುವ ನೀರು ವಿಷಗೊಳ್ಳುತ್ತದೆ, ಗಾಳಿಯಲ್ಲಿ ವಿಷಕಾರಿ ಅನಿಲಗಳು ಮಿಶ್ರಣವಾಗುತ್ತವೆ, ಮಲಿನ್ಯದಿಂದ ಶ್ವಾಸಕೋಶ ಸಮಸ್ಯೆಗಳು ಹೆಚ್ಚಾಗುತ್ತವೆ ಕಿಡ್ನಿ, ಹೃದಯ ಹಾಗೂ ಚರ್ಮ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ, ಮನೆಯಿಂದ ರಸ್ತೆವರೆಗೆ, ಮಾರುಕಟ್ಟೆಯಿಂದ ನಗರವರೆಗೆಶ್ರಿಸ್ವಚ್ಛತೆಯ ಕೊರತೆಯು ಆರೋಗ್ಯಕ್ಕೆ ಮಾಡುವ ಹಾನಿ ಅಪಾರ. ಇದಲ್ಲದೇ ಮಕ್ಕಳಲ್ಲಿನ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆರೋಗ್ಯದ ಈ ಹಿನ್ನಡೆ ನಮ್ಮ ನಾಗರೀಕ ಜೀವನ ಶೈಲಿಯ ವೈಫಲ್ಯದ ಸ್ಪಷ್ಟ ಸೂಚನೆ.  

ಇಂದಿನ ಹೊಸ ಪೀಳಿಗೆಗೆ ಶಿಕ್ಷಣದ ಮೂಲಕ ಪರಿಸರಸ್ನೇಹಿ ಮನೋಭಾವವನ್ನು ಬೆಳೆಸಬೇಕಿದ್ದು, ಕುಟುಂಬ, ಶಾಲೆ, ಕಾಲೇಜುಶ್ರಿಎಲ್ಲ ಕಡೆ ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಮ್ಮ ಪಠ್ಯಕ್ರಮದಲ್ಲಿ ಸ್ವಚ್ಛತೆ, ಮಲಿನ್ಯ ನಿಯಂತ್ರಣ, ಪುನರ್‌ಚಕ್ರಣ, ಪರ್ಯಾಯ ವಸ್ತುಗಳ ಬಳಕೆ ಕುರಿತು ಘನವಾದ ಅಧ್ಯಾಯಗಳನ್ನು ಸೇರಿಸಬೇಕಿದೆ. ಪುಸ್ತಕದಲ್ಲಿ ಮಾತ್ರವಲ್ಲ, ಪ್ರಾಯೋಗಿಕ ಶಿಕ್ಷಣವೂ ಮುಖ್ಯವಾಗಿದ್ದು ಕಸ ವಿಂಗಡಣೆ ಅಭ್ಯಾಸ, ಪರಿಸರ ಕ್ಲಬ್‌ಗಳು, ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿಯನ್ನು ಉಂಟುಮಾಡುವುದು ಮುಖ್ಯ. ಹೊಸ ಪೀಳಿಗೆಗೆ ಪರಿಸರ ಪ್ರೀತಿ ಬೆಳೆಸಿದಾಗಲೇ, ದೀರ್ಘಾವಧಿಯಲ್ಲಿ ಸಮಾಜ ಬದಲಾಗಲು ಸಾಧ್ಯ. 

ಈ ನಿಟ್ಟಿನಲ್ಲಿ ಸಾಮಾಜಿಕ ಮನೋಭಾವ ಬದಲಾಗಬೇಕಿದ್ದು, ‘ಇದು ನನ್ನ ಕೆಲಸವಲ್ಲ’ ಎಂಬ ತಪ್ಪು ದೃಷ್ಟಿಕೋನ, ಕಸ ವಿಲೇವಾರಿಯ ಪ್ರಶ್ನೆಯಲ್ಲಿ ನಮ್ಮ ಸಮಾಜ ಈಗಲೂ “ಸರ್ಕಾರ ಮಾಡಲಿ” ಎಂಬ ನಿಲುವನ್ನು ಅಳವಡಿಸಿಕೊಂಡಿದೆ. ಆದರೆ ನಾಗರಿಕರ ಪಾಲ್ಗೊಳ್ಳಿಕೆ ಇಲ್ಲದಿದ್ದರೆ ಯಾವ ವ್ಯವಸ್ಥೆಯೂ ಶಾಶ್ವತವಾಗುವುದಿಲ್ಲ. ಸ್ವಚ್ಛತೆ ಎಂದರೆ ವೈಯುಕ್ತಿಕ ಶಿಸ್ತು ಮತ್ತು ಸಮೂಹ ಜವಾಬ್ದಾರಿಯ ಸಂಯೋಜನೆ. ಪ್ರತಿಯೊಬ್ಬರೂ ಪಾಲ್ಗೊಂಡಾಗ ಮಾತ್ರ ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರುತ್ತವೆ. ಈ ಮನೋಭಾವ ಬದಲಾದಾಗ, ಕಸ ವಿಲೇವಾರಿಯಲ್ಲಿ ನಮಗೆಲ್ಲರಿಗೂ ಜಯ.  

ಮಾಧ್ಯಮ ಮತ್ತು ಜನಜಾಗೃತಿ ಅರಿವು ಹೆಚ್ಚಿಸಿದಾಗ ಕ್ರಮ ಬದಲಾಗುತ್ತದೆ ದೂರದರ್ಶನ, ಸಾಮಾಜಿಕ ಜಾಲತಾಣಗಳು, ಪತ್ರಿಕೆ, ರಂಗಭೂಮಿ ರೂಪಗಳ ಮಾಧ್ಯಮಗಳು ಜನರಲ್ಲಿ ಅರಿವನ್ನು ಹೆಚ್ಚಿಸಿ  ಜಾಗೃತಿ ಅಭಿಯಾನಗಳ ಮೂಲಕ ಜನಮನದ ಮೇಲೆ ಆಳವಾದ ಸಕಾರಾತ್ಮಕ ಆದರ್ಶಗಳನ್ನು ಹೆಚ್ಚಿಸಿದಾಗ ಜನರು ಕ್ರಮಬದ್ಧವಾಗಿ ನಡೆದುಕೊಳ್ಳುತ್ತಾರೆ. 

ಕಸ ವಿಲೇವಾರಿಯಲ್ಲಿ ನಾವು ನಾಗರೀಕತೆ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದೇವೆ ಎನ್ನುವುದು ಕಹಿ ಸತ್ಯ. ಕಸದ ಪ್ರಮಾಣ ಹೆಚ್ಚುತ್ತಿರುವಾಗ, ನಮ್ಮ ಶಿಸ್ತು, ಅಭ್ಯಾಸ, ನಿರ್ವಹಣಾ ವಿಧಾನಗಳು, ವ್ಯವಸ್ಥೆಗಳು ಬದಲಾಗಬೇಕಿದೆ. ನಾಗರೀಕತೆ ಎಂದರೆ ಕೇವಲ ವಿಜ್ಞಾನಹಿತಂತ್ರಜ್ಞಾನದಲ್ಲಿ ಪ್ರಗತಿ ಅಲ್ಲ; ಅದು ಸ್ವಚ್ಛತೆ, ಜವಾಬ್ದಾರಿತ್ವ, ಪರಿಸರ ಸ್ನೇಹಿ ಜೀವನಶೈಲಿ, ಮತ್ತು ಸಮೂಹಪ್ರಜ್ಞೆಯ ಸಂಕೇತವೂ ಹೌದು. ನಾವು ಕಸವನ್ನು ಸರಿಯಾಗಿ ನಿಭಾಯಿಸುವ ಕಲೆಯನ್ನು ಅಳವಡಿಸಿಕೊಂಡಾಗ ಮಾತ್ರ, ನಿಜವಾದ ಅರ್ಥದಲ್ಲಿ ‘ನಾಗರೀಕ ಸಮಾಜ’ದ ಪರಿವಿಡಿಯಲ್ಲಿ ನಾವು ಸ್ಥಾನ ಪಡೆಯುತ್ತೇವೆ. ಪರಿಸರವನ್ನು ರಕ್ಷಿಸುವುದು, ವಿಲೇವಾರಿಯನ್ನು ಸುಧಾರಿಸುವುದು ಮತ್ತು ಮುಂದಿನ ಪೀಳಿಗೆಗೆ ಶುದ್ಧ ವಾತಾವರಣವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ. ಕಸ ಸಮಸ್ಯೆಯ ಪರಿಹಾರ ‘ಯಾರದ್ದೋ ಕೆಲಸ’ ಅಲ್ಲಶ್ರಿಅದು ನಮ್ಮೆಲ್ಲರ ಜೀವಸಂಕಷ್ಟದ ಪ್ರಶ್ನೆ. ಈ ಜಾಗೃತಿಯೊಂದಿಗೆ ನಡೆದುಕೊಂಡಾಗ ಮಾತ್ರ ನಾಗರೀಕತೆಯ ಈ ಸೋಲನ್ನು ಜಯವಾಗಿ ಪರಿವರ್ತಿಸಬಹುದು.                                                                            

ಅನಂತ ಪಪ್ಪು

ಮೋ:9448527870