ಹಣ್ಣಿಕೇರಿಯಲ್ಲಿ ಹಳೇ ವೈಷಮ್ಯಕ್ಕೆ ರಕ್ತಪಾತ: ಜಾತ್ರೆ ಸಂಭ್ರಮಕ್ಕೆ ಕೊಲೆಯ ಕರಿಛಾಯೆ

ಹಣ್ಣಿಕೇರಿಯಲ್ಲಿ ಹಳೇ ವೈಷಮ್ಯಕ್ಕೆ ರಕ್ತಪಾತ: ಜಾತ್ರೆ ಸಂಭ್ರಮಕ್ಕೆ ಕೊಲೆಯ ಕರಿಛಾಯೆ Bloodshed over old enmity in Hannikeri: Murder casts shadow over fair celebrations


ಬೆಳಗಾವಿ 05: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ಹಳೇ ರಾಜಕೀಯ ವೈಷಮ್ಯದಿಂದ ಜಾತ್ರೆಯ ಸಂಭ್ರಮದ ನಡುವೆಯೇ ನೆತ್ತರು ಹರಿದಿದೆ. ಗ್ರಾಮದ ನಿವಾಸಿ 50 ವರ್ಷದ ಸಂಗನಗೌಡ ಪಾಟೀಲ್ ಕೊಲೆಯಾದ ದುರ್ದೈವಿ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಹಿತಿ ನೀಡಿ ಸಂಗನಗೌಡ ಪಾಟೀಲ್ ಎಂಬುವವರನ್ನು ಎದುರಾಳಿ ಗುಂಪು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾರೆ. ಎಂಟು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ದೇಮಪ್ಪ ಬಳಗನ್ನವರ, ಮಂಜುನಾಥ ಬಳಗನ್ನವರ, ರುದ್ರ​‍್ಪ ಬಳಗನ್ನವರ, ವಿಜಯ ಬಳಗನ್ನವರ, ಸೂರ​‍್ಪ ಬಳಗನ್ನವರ, ಸಿದ್ದಪ್ಪ ಸಿಂಗಾಡಿ, ನಾಗರಾಜ ಬಳಗನ್ನವರ ಹಾಗೂ ಬಸವಂತಪ್ಪ ಬಳಗನ್ನವರ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ಗ್ರಾಮದ ಎರಡು ಕುಟುಂಬಗಳ ನಡುವೆ ರಾಜಕೀಯ ಮತ್ತು ವೈಯಕ್ತಿಕ ವೈಷಮ್ಯವಿತ್ತು.. ಇಂದು ಜಾತ್ರೆಯ ಮೆರವಣಿಗೆ ಸಾಗುತ್ತಿದ್ದಾಗ, ಸಂಗನಗೌಡ ಅವರು ರಾಜಕೀಯ ವಿರೋಧಿಗಳ ಮನೆ ಮುಂದೆ ಕುಣಿಯುತ್ತಿದ್ದರು ಎನ್ನಲಾಗಿದೆ. ಆರೋಪಿಗಳು ನಮ್ಮ ಮನೆ ಮುಂದೆ ಕುಣಿಯಬೇಡ, ಮುಂದೆ ಹೋಗು ಎಂದು ವಾಗ್ವಾದ ನಡೆಸಿದ್ದಾರೆ. ಈ ಸಣ್ಣ ಜಗಳವೇ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಮಾಡಲು ಮೊದಲೇ ಸಜ್ಜಾಗಿದ್ದ ಆರೋಪಿಗಳ ಗುಂಪು ಸಂಗನಗೌಡ ಅವರ ಮೇಲೆ ಏಕಾಏಕಿ ಮುಗಿಬಿದ್ದಿದೆ. ಕುಡಗೋಲು, ಕೊಡಲಿ, ಚೈನ್, ಬಡಿಗೆ ಹಾಗೂ ಕಬ್ಬಿನ ರಾಡ್‌ಗಳಂತಹ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.  ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಗನಗೌಡ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದರು. 

ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪ್ರಕರಣದ ಬೆನ್ನಟ್ಟಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಳೇ ವೈಷಮ್ಯವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದು, ಸದ್ಯ ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಕೆ. ರಾಮರಾಜನ್ ಅವರು ಹೇಳಿದರು.