ಮೂಡಲಗಿ

ಸಾಕಷ್ಟು ಅನುದಾನ ಬಂದರೂ ಅಭಿವೃದ್ಧಿಯಿಂದ ಭೈರನಟ್ಟಿ ವಂಚಿತ: ಜೋಗನ್ನವರ

ಸಾಕಷ್ಟು ಅನುದಾನ ಬಂದರೂ ಅಭಿವೃದ್ಧಿಯಿಂದ ಭೈರನಟ್ಟಿ ವಂಚಿತ: ಜೋಗನ್ನವರ

ಮೂಡಲಗಿ 21: ತಾಲೂಕಿನ ಹುಣಶ್ಯಾಳ ಪಿವೈ ಗ್ರಾಪಂ ವ್ಯಾಪ್ತಿಗೆ ಬರುವ ಭೈರನಟ್ಟಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೇ ಭೈರನಟ್ಟಿ ಗ್ರಾಮ ಕೊಳಚೆ ಪ್ರದೇಶದಂತೆ ಗೋಚರಿಸುತ್ತಿದೆ. ರುದ್ರ ಭೂಮಿಯಲ್ಲಿ ರಾತ್ರಿಯ ವೇಳೆಗೆ ಬೆಳಕಿನ ವ್ಯವಸ್ಥೆ, ಗ್ರಾಮದಲ್ಲಿ ಚರಂಡಿಗಳಿಲ್ಲದೇ ರಸ್ತೆ ಮೇಲೆ ಕೊಳಚೆ ನೀರು ಹರಿಯುವುದರಿಂದ ಗ್ರಾಮಸ್ಥರ ಓಡಾಟಕ್ಕೆ ತೊಂದರೆ ಆಗುತ್ತಿದೆ ಎಂದು ಸಾಕಷ್ಟು ಬಾರಿ ಹೇಳಿದರೂ ಸಹ ಅಧಿಕಾರಿಗಳು ಕ್ಯಾರೇ ಅನುತ್ತಿಲ್ಲ ಎಂದು ಹುಣಶ್ಯಾಳ ಪಿವೈ ಗ್ರಾಪಂ ಸದಸ್ಯ ಹಣಮಂತ ಜೋಗನ್ನವರ ಹೇಳಿದರು. 

ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂಗೆ ಸಾಕಷ್ಟು ಅನುದಾನ ಬಂದರೂ ಸಹ ಭೈರನಟ್ಟಿ ಗ್ರಾಮದಲ್ಲಿ ಯಾವುದೆ ಒಂದು ಕೆಲಸ ಮಾಡದೇ ಜನರಿಂದ ಮಾತ್ರ ತೆರಿಗೆ ವಸೂಲಿ ತೆಗೆದುಕೊಳ್ಳುತ್ತಿರುವುದರಿಂದ ಈ ಗ್ರಾಮದ ಜನರು ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ತಾಪಂ ಕಾರ್ಯನಿರ್ವಾಹಕ ಮತ್ತು ಜಿಪಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಾಕಷ್ಟು ಬಾರಿ ತಿಳಿಸಿದರೂ ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಗ್ರಾಪಂ ಕಾರ್ಯಾಲಯದ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಸಾರ್ವಜನಿಕರ ಕೆಲಸಗಳ ಬಗ್ಗೆಯೂ ಕಾಳಜಿ ತೋರುತ್ತಿಲ್ಲ. ಭೈರನಟ್ಟಿ ಗ್ರಾಪಂ ಸದಸ್ಯರಿಗೆ ಯಾವುದೇ ಬೆಲೆ ಇಲ್ಲದಂತಾಗಿ ಸದಸ್ಯರಿಗೆ ಯಾವುದೇ ಕೆಲಸಗಳ ಮಾಹಿತಿ ನೀಡದೇ ತಮಗೆ ಬೇಕಾದವರಿಗೆ ಶೀಘ್ರವಾಗಿ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ. ಇದರಿಂದ ಭೈರನಟ್ಟಿ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದರು. 

ಭೈರನಟ್ಟಿ ಗ್ರಾಮದ ನಿವಾಸಿ ರವಿಂದ್ರ ಡೋಳ್ಳಿ ಮಾತನಾಡಿ, ನಮ್ಮ ಗ್ರಾಮದಿಂದ ಸದಸ್ಯರನ್ನು ಆಯ್ಕೆ ಮಾಡಿ ಹುಣಶ್ಯಾಳ ಪಿವೈ ಗ್ರಾಪಂಗೆ ಕಳಿಸಿದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಪಂ ಸದಸ್ಯರು ಬಗ್ಗೆ ಹರಿಸಬೇಕು ಆದರೇ ಗ್ರಾಮಸ್ಥರೇ ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಮಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಶೀಘ್ರವಾಗಿ ಎಚ್ಚೆತ್ತುಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡದಿದ್ದರೇ ಭೈರನಟ್ಟಿ ಗ್ರಾಮಸ್ಥರು ಗ್ರಾಪಂ ಕಾರ್ಯಾಲಯದ ಎದುರು ಉಗ್ರ ಹೋರಾಟ ಮಾಡುವ ಮೂಲಕ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಭೈರನಟ್ಟಿ ಗ್ರಾಮದ ನಿವಾಸಿಗಳಾದ ಶೇಖರ ದೊಡ್ಡಮನಿ, ಲಕ್ಷಪ್ಪ ಪೂಜೇರಿ, ಮುತ್ತು ರಡ್ಡಿ, ರವಿ ಉಂದ್ರಿ ಉಪಸ್ಥಿತರಿದ್ದರು. 


ಸುದ್ದಿ ಓದಿ