ಅಂತರರಾಷ್ಟ್ರೀಯ

ಶಾಂಘೈ ಸಹಕಾರ ಸಂಘಟನೆ ಸೇರಲು ಇಚ್ಚಿಸಿದ ಬೆಲಾರಸ್!

ಶಾಂಘೈ ಸಹಕಾರ ಸಂಘಟನೆ ಸೇರಲು ಇಚ್ಚಿಸಿದ ಬೆಲಾರಸ್!

ಬೀಜಿಂಗ್: ಜುಲೈ 26: ಶಾಂಘೈ ಸಹಕಾರ ಸಂಸ್ಥೆಯ (SCO) ಸದಸ್ಯರಾಗಲು ಬೆಲಾರಸ್‌ ರಾಷ್ಟ್ರದ ವಿನಂತಿಯನ್ನು ಚೀನಾ ಬೆಂಬಲಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿ, “ಎಸ್‌ಸಿಒಗೆ ಸೇರಲು ಬೆಲಾರಸ್‌ನ ವಿನಂತಿಯನ್ನು ಚೀನಾ ಬೆಂಬಲಿಸುತ್ತದೆ ಮತ್ತು ಅದನ್ನು ಸಕ್ರಿಯವಾಗಿ ಪರಿಶೀಲಿಸಲಿದೆ. ಅಲ್ಲದೆ, ಇತರ ಸದಸ್ಯ ರಾಷ್ಟ್ರಗಳೊಂದಿಗೆ ಜೊತೆಗೂಡಿ ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ SCO ಗೆ ಸೇರಲು ಬೆಲಾರಸ್ ತನ್ನ ಅರ್ಜಿಯನ್ನು ಸಲ್ಲಿಸಿದೆ. ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಂಘಟನೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಎಸ್‌ಸಿಒ 2001 ರಲ್ಲಿ ಚೀನಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್‌ನಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಎಸ್‌ಸಿಒನ ವೀಕ್ಷಕ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನ, ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ ಸೇರಿವೆ, ಆದರೆ ಅರ್ಮೇನಿಯಾ, ಅಜೆರ್ಬೈಜಾನ್, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟರ್ಕಿ ಪಾಲುದಾರ ರಾಷ್ಟ್ರಗಳಾಗಿವೆ.

ಸುದ್ದಿ ಓದಿ