ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಸಿಎಂಗೆ ಮನವಿ
ಲೋಕದರ್ಶನ ವರದಿ
ಬೀಳಗಿ, 09 : ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾ ಹಾಗೂ ಬೀಳಗಿ ತಾಲೂಕು ಘಟಕಗಳ ಸಹಯೋಗದಲ್ಲಿ ತಹಶೀಲ್ದಾರ ಕಚೇರಿ ಮುಂದೆ ಸವಳು ಜವಳು ನಿರ್ಮೋಲನೆ, ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸಬೇಕು, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ, ಬೆಳೆ ಪರಿಹಾರ ಸರಿಯಾಗಿ ವಿತರಿಸಬೇಕು, ವಿದ್ಯುತ್ ಸಮಸ್ಯೆ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ವಿನೋದ ಹತ್ತಳ್ಳಿ ಮೂಲಕ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳನ್ನು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರು ಬಿತ್ತನೆ ಮಾಡಿದ ಈರುಳ್ಳಿ, ಗೋವಿನ ಜೋಳ ಸೇರಿದಂತೆ ಮುಂತಾದ ಪರಿಹಾರ ವ್ಯಾಪ್ತಿಯಲ್ಲಿ ಬರುವ ಬೆಳೆಗಳನ್ನು ನಮೂದು ಮಾಡದೇ ಕಬ್ಬು ನಮೂದು ಮಾಡಿದ್ದಾರೆ, ಬೆಳೆಗಳು ಅದಲು ಬದಲು ಮಾಡಿದ್ದಾರೆ, ಎಲ್ಲ ಸರಿಯಾಗಿದ್ದರೂ ತಾಂತ್ರಿಕ ತೊಂದರೆಗಳಿಂದ ಪರಿಹಾರ ಜಮೆಯಾಗಿರುವದಿಲ್ಲ, ಬೆಳೆ ವಿಮೆ ಪಾವತಿಸಿದವರಿಗೆ ಕ್ಲೇಮ್ ನೀಡದ ವಿಮಾ ಕಂಪನಿ, ಸರಕಾರ ರೈತರಿಗೆ ಆಗಿರುವ ಅನ್ಯಾಯ ಮಾಡುತ್ತಿದ್ದು ತಕ್ಷಣ ಸರಿಪಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಿದರೆ ಬೋರವೆಲ್ ಮರುಪೂರ್ಣಗೊಳುವವು, ಕೃ.ಮೇ ಯೋಜನೆ ನೀರು ನಿಂತ ಪರಿಣಾಮ ಸವಳು-ಜವಳು ಆಗಿ ರೈತರ ಬಿತ್ತನೆಗೆ ತೊಂದರೆಯಾಗಿವೆ, ಕಂದಾಯ ಕೃಷಿ, ತೋಟಗಾರಿಕೆ, ರೇಷ್ಮೆ, ಸರ್ವೆ, ವಿದ್ಯುತ್ ಇಲಾಖೆಯಲ್ಲಿ ರೈತರು ಯಾವುದೇ ಸೇವೆ ಪಡೆಯಲು ಆಪಾರ ಪ್ರಮಾಣ ಹಣ ವ್ಯಯ ಮಾಡುವಂತಾಗಿದ್ದು ತಕ್ಷಣ ಸರಕಾರ ಮರು ಪರೀಶೀಲನೆ ಮಾಡಬೇಕು ಈ ಎಲ್ಲ ಬೇಡಿಕೆಗಳನ್ನು ಈಡೆರಿಸದಿದ್ದಲ್ಲಿ ದಿ.ಜ.21 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದರು.
ಜಿಲ್ಲಾ ಕೋಶ್ಯಾದ್ಯಕ್ಷ ಮುದಕಪ್ಪ ವಡವಾಣಿ ಮಾತನಾಡಿ, ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗೆ ಹಾಕಿರುವದರಿಂದ ರೈತರ ಯೋಜನೆಗಳು ಹಾಗೂ ಅಭಿವೃದ್ದಿ ಕಾರ್ಯಗಳು ಹಿನ್ನೆಡೆಯಾಗುತ್ತಿದ್ದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು ಸರಕಾರ ತಕ್ಷಣ ವಿಮಾ ಕ್ಲೇಮ್ ಮಾಡಬೇಕು ಕೆಲವು ರೈತರಿಗೆ ಪರಿಹಾರ ದೊರೆತಿರುವದಿಲ್ಲ ತಕ್ಷಣ ಒದಗಿಸಬೇಕು ಎಂದು ಆಗ್ರಹ ಪಡಿಸಿದರು.
ಭಾರತೀಯ ಕಿಸಾನ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕಾರ್ಯದರ್ಶಿ ಗುರು ಅನಗವಾಡಿ, ಮುತ್ತು ಮಮದಾಪೂರ, ಟಿ ಎಚ್ ಸನಗಿನ್, ಮಂಜು ಭಾವಿ, ಲಕ್ಷ್ಮಣ್ಣ ಸವನಾಳ, ಅಶೋಕ ಮಂತ್ರಿ, ಶೇಖರ ಕಾಖಂಡಕಿ, ಉಮೇಶ ಚನ್ನಿ, ಗುರು ಕಾಖಂಡಕಿ, ಗುರು ಅಂಗಡಿ, ಸಿದ್ದಪ್ಪ ಕೂಗಟಿ ರಮೇಶ ಮೇಟಿ, ಹಣಮಂತ ದೊರೆಗೋಳ, ಸಂಗಪ್ಪ ಅಂಟಿನ ಇದ್ದರು.