ಹುಕ್ಕೇರಿ

ಅನ್ನಪೂರ್ಣೇಶ್ವರಿ ಯೋಜನೆಯಿಂದ ರೈತರಿಗೆ ನೀರಿನ ಆಶಾಕಿರಣ: ಪ್ರಕಾಶ್ ಹುಕ್ಕೇರಿ

ಅನ್ನಪೂರ್ಣೇಶ್ವರಿ ಯೋಜನೆಯಿಂದ ರೈತರಿಗೆ ನೀರಿನ ಆಶಾಕಿರಣ: ಪ್ರಕಾಶ್ ಹುಕ್ಕೇರಿ


ಹುಕ್ಕೇರಿ, ಆ. 4: ಈ ವರ್ಷ ಕಡಿಮೆ ಮಳೆಯ ಪರಿಣಾಮ ಚಿಕ್ಕೋಡಿ-ಸದಳಗಾ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿತ್ತು. ಬೇಸಿಗೆಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಕುಸಿದ ಪರಿಣಾಮ ಅಂತರ್ಜಲ ಮಟ್ಟವೂ ಇಳಿಕೆಯಾಗಿದ್ದು, ರೈತರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅನ್ನಪೂರ್ಣೇಶ್ವರಿ ಎತ್ತಿನ ನೀರಾವರಿ ಯೋಜನೆ ರೈತರಿಗೆ ವರದಾನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.  

ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರೀಶೀಲಿಸಿದ ಬಳಿಕ ಅವರು ಮಾತನಾಡಿ, ಕಳೆದ 15 ದಿನಗಳಿಂದ ಕೃಷ್ಣಾ ನದಿಯಿಂದ ಅತ್ಯಾಧುನಿಕ ಪಂಪ್ಗಳ ಮೂಲಕ ನೀರನ್ನು ಎತ್ತಿ, ಸುಮಾರು 15 ಕಿ.ಮೀ. ದೂರದಲ್ಲಿರುವ ಚಿಕ್ಕೋಡಿ ಬಲದಂಡೆ ಕಾಲುವೆಯ ಬ್ರಾಂಚ್ ಕೆನಾಲ್ (ಅಃಅ) ಮೂಲಕ ನಿರಂತರವಾಗಿ ಹರಿಸಲಾಗುತ್ತಿದೆ ಎಂದು ಹೇಳಿದರು.  

ಈ ಯೋಜನೆಯ ಪರಿಣಾಮ ಹಿರೇಕೋಡಿ, ನಾಗರಾಳ, ನೇಜ, ಶಿರಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಕಾಲುವೆಯಲ್ಲಿ ನಿರಂತರ ನೀರು ಹರಿಯುತ್ತಿರುವುದರಿಂದ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಲಭ್ಯವಾಗುತ್ತಿದೆ ಎಂದು ತಿಳಿಸಿದರು.  

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಹುತೇಕ ನಿವಾರಣೆಯಾಗಿದ್ದು, ಮಳೆಆಧಾರಿತ ಕೃಷಿಯನ್ನೇ ನಂಬಿದ್ದ ರೈತರಲ್ಲಿ ಹೊಸ ಆತ್ಮವಿಶ್ವಾಸ ಮೂಡಿದೆ. ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ ಎಂದು ಹೇಳಿದರು.  

ಪ್ರಕಾಶ್ ಹುಕ್ಕೇರಿ ಮಾತನಾಡಿ, “ಅನ್ನಪೂರ್ಣೇಶ್ವರಿ ಎತ್ತಿನ ನೀರಾವರಿ ಯೋಜನೆ ಕೇವಲ ನೀರು ಹರಿಸುವ ಯೋಜನೆಯಲ್ಲ; ಇದು ರೈತರ ಬದುಕಿಗೆ ಭರವಸೆ ತುಂಬುವ ಯೋಜನೆ. ಯೋಜನೆಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ. ಮುಂದೆಯೂ ರೈತರ ಹಿತದೃಷ್ಟಿಯಿಂದ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು,” ಎಂದು ಹೇಳಿದರು. 


ಸುದ್ದಿ ಓದಿ