ಪೆರು ನಲ್ಲಿ ಹೆಲಿಕಾಪ್ಟರ್ ಪತನ: ಐವರು ಸೈನಿಕರು ಸಾವು
ಲಿಮಾ, ಏಪ್ರಿಲ್ 18: ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ (ಸಿಸಿಎಫ್‌ಎಫ್‌ಎಎ) ತಿಳಿಸಿದೆ. ಶನಿವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಒಟ್ಟು 12 ಸೈನಿಕರನ್ನು ಹೊತ್ತ ಹೆಲಿಕಾಪ್ಟರ್ ಅಕ್ರಮ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಜಾಗೃತ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಪ್ರಕಟಣೆಯನ್ನು ಸಿಸಿಎಫ್‌ಎಫ್‌ಎ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ. ‘ಸಶಸ್ತ್ರ ಪಡೆಗಳ ಧೈರ್ಯಶಾಲಿ ಸಿಬ್ಬಂದಿ ಸಾವಿಗೆ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ ವಿಷಾಧಿಸುತ್ತಿದೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.’ ಎಂದು ಪ್ರಕಟಣೆ ತಿಳಿಸಿದೆ.ದುರಂತದಲ್ಲಿ ಮೃತಪಟ್ಟ ಐವರು ಸೈನಿಕರ ಹೆಸರನ್ನು ಬಿಡುಗಡೆ ಮಾಡಲಾಗಿದೆ.ಇನ್ನಿಬ್ಬರು ಸೈನಿಕರಿಗಾಗಿ ಶೋಧ ನಡೆಸಲಾಗುತ್ತಿದ್ದು, ಇತರ ಐವರನ್ನು ರಕ್ಷಿಸಲಾಗಿದೆ. ಯಾಂತ್ರಿಕ ವೈಫಲ್ಯದ ಪರಿಣಾಮವಾಗಿ ಈ ದುರಂತ ಸಂಭವಿಸಿದ್ದು, ಇದರಿಂದಾಗಿ ಹೆಲಿಕಾಪ್ಟರ್ ವಿಲ್ಕಾನೋಟಾ ನದಿಯಲ್ಲಿ ಪತನಗೊಂಡಿದೆ ಎಂದು ಸಿಸಿಎಫ್‌ಎಫ್‌ಎ ತಿಳಿಸಿದೆ.