ಹಸಿವು ಮುಕ್ತ ಸಮಾಜ
A hunger free society
‘ಅನ್ನಂ ಬ್ರಹ್ಮೇತಿ’ ಎಂದು ವೇದಗಳು ಸಾರಿವೆ. ತ್ರಿಪದಿಯ ಕವಿ ಸರ್ವಜ್ಞರಂತೂ ಅನ್ನದ ಮಹಿಮೆಯನ್ನು ಇನ್ನಿಲ್ಲದಂತೆ ವರ್ಣಿಸಿದ್ದಾರೆ. “ಅನ್ನದೇವರ ಮುಂದೆ ಇನ್ನು ದೇವರು ಉಂಟೆ! ಅನ್ನವುಂಟಾದರುಣಲುಂಟು ಜಗಕ್ಕೆಲ್ಲ! ಅನ್ನವೇ ಪ್ರಾಣ ಸರ್ವಜ್ಞ! ಇದರ ಅರ್ಥ, ಅನ್ನವೆಂಬ ದೇವರ ಮುಂದೆ ಬೇರೆ ಯಾವ ದೇವರೂ ಇಲ್ಲ, ಎಲ್ಲಿಯವರಗೆ ಮನುಷ್ಯನಿಗೆ ತಿನ್ನಲು ಈ ಭೂಮಿಯಲ್ಲಿ ಅನ್ನ ದೊರೆಯುವುದೋ ಅಲ್ಲಿಯವರೆಗೆ ಮಾತ್ರ ಮನುಷ್ಯನ ಜೀವನ ಇರುತ್ತದೆ ಎಂದು. ಅನ್ನವೆಂದರೆ ಮನುಷ್ಯನ ಜೀವಧಾತುವಾಗಿದ್ದು, ದಾನಗಳಲ್ಲಿ ಅತ್ಯಂತ ಶ್ರೇಷ್ಟವಾದ ದಾನ ಅನ್ನದಾನ. ಏಕೆಂದರೆ ಮನುಷ್ಯನಿಗೆ ಧನ, ಕನಕ, ಆಸ್ತಿ ಅಥವಾ ಏನನ್ನೇ ದಾನವಾಗಿ ನೀಡಿದರೂ ಆತನನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಆದರೆ ಹಸಿದವನಿಗೆ ಅನ್ನವನ್ನು ನೀಡಿದರೆ ಆತ ತೃಪ್ತನಾಗುತ್ತಾನೆ. ಆದ್ದರಿಂದ ಒಂದು ಅನ್ನದ ಅಗುಳಿನ ಮಹತ್ವ ಹಸಿದವನಿಗೆ ಚೆನ್ನಾಗಿ ತಿಳಿದಿರುತ್ತದೆ. ಅನ್ನವೇ ದೇವರು, ಅನ್ನವೇ ಬದುಕು, ಅನ್ನವೇ ಸಂಸ್ಕೃತಿ, ಅನ್ನವೇ ಪ್ರಸಾದ.
ಮಾನವನಿಗೆ ಬದುಕಲು ಆಹಾರ ಅತ್ಯಂತ ಅವಶ್ಯಕ. ಆದರೆ ಇಂದು ಹಸಿವಿನ ಕೂಗು ಜಗತ್ತಿನಲ್ಲೆಡೆ ಮೊಳಗುತ್ತಿದೆ. 2024ರಲ್ಲಿ ಭಾರತವು ಜಾಗತಿಕ ಹಸಿವು ಸೂಚ್ಯಾಂಕದ 127 ದೇಶಗಳಪಟ್ಟಿಯಲ್ಲಿ 105ನೇ ಸ್ಥಾನಕ್ಕೆ ಕುಸಿದಿದೆ. ಇದು ಗಮನಾರ್ಹ ಹಸಿವನ್ನು ಎತ್ತಿ ತೋರಿಸುತ್ತದೆ. ಜಾಗತಿಕವಾಗಿ ಆಹಾರದ ಕೊರತೆಯಿಂದಾಗಿ ಪ್ರತಿದಿನ ಅಂದಾಜು 733 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಅಕ್ಟೋಬರ್ 2023ರಲ್ಲಿ ಜಾಗತಿಕ ಹಸಿವು ಸೂಚ್ಯಾಂಕದ ವರದಿ ಬಿಡುಗಡೆಯಾದಾಗ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿತ್ತು. ಅದರ ಹಿಂದಿನ ವರ್ಷ 2022ರ ಸೂಚ್ಯಾಂಕದಲ್ಲಿ ದೇಶವು 107ನೇ ಸ್ಥಾನದಲ್ಲಿತ್ತು. ಹಲವು ಸೂಚಿಗಳಲ್ಲಿ ಭಾರತವು ಬೇರೆ ದೇಶಗಳಿಗೆ ಹೋಲಿಸಿದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಇದೀಗ 2024ರ ವರದಿಯ ಸೂಚ್ಯಾಂಕದಲ್ಲಿ ಭಾರತವು 27.3 ಅಂಕಗಳೊಂದಿಗೆ ಕೊಂಚ ಸುಧಾರಿಸಿದ್ದರೂ, ಹಸಿವಿನ ಗಂಭೀರ ಮಟ್ಟವನ್ನು ಪ್ರತಿಬಿಂಬಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ವರದಿಯು ತಿಳಿಸಿದೆ. ಇನ್ನು 2016ರಲ್ಲಿ 29.3 ಅಂಕ ಇದ್ದು, 2024ರ ಅಂಕಗಳಿಗೆ ಹೋಲಿಸಿದರೆ ಸ್ವಲ್ಪ ಸುದಾರಣೆ ಕಂಡುಬಂದಿದೆ. ಆದರೆ, ಕಳೆದ 8 ವರ್ಷಗಳ ಈ ಅಂಕಗಳಲ್ಲಿ ವ್ಯತ್ಯಾಸವು ಭಾರತವು ಹೆಚ್ಚಿನ ಯಶಸ್ಸನ್ನು ಕಂಡಿಲ್ಲ ಎಂಬುದನ್ನು ಸೂಚಿಸುತ್ತದೆ.
ಹಸಿವು ಮನುಕುಲವನ್ನು ಸದಾ ಬಾಧಿಸುವ ಬಲುಮುಖ್ಯ ಅಂಶವಾಗಿದೆ. ಒಬ್ಬ ವ್ಯಕ್ತಿಯು ಆರೋಗ್ಯಕರ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅಗತ್ಯವಾದ ಕನಿಷ್ಟ ಆಹಾರ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಕಾಲ ವಿಫಲವಾದಲ್ಲಿ ಅದನ್ನು ಹಸಿವು ಎಂದು ವ್ಯಾಖ್ಯಾನಿಸುತ್ತದೆ. ವರದಿಯ ಪ್ರಕಾರ ಹಸಿವು ಎಂದರೆ ಸುದೀರ್ಘ ಕಾಲದಲ್ಲಿ ಸಾಕಷ್ಟು ಕ್ಯಾಲೋರಿ ಸೇವನೆ ಮಾಡಲಾಗದೇ ಅನುಭವಿಸುವ ತೊಂದರೆಗಳನ್ನು ಸೂಚಿಸುತ್ತದೆ. ಹಸಿವು ಎಂದರೆ ಆಹಾರ ಸಿಗದಿರುವ ಸ್ಥಿತಿ ಎಂದು ಮಾತ್ರ ಅರ್ಥೈಸಲು ಸಾಧ್ಯವಿಲ್ಲ. ಹಸಿವು ಎಂದರೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳು ದೊರಕದಿರುವುದು, ಅಗತ್ಯ ಇರುವಷ್ಟು ಕ್ಯಾಲೋರಿ ಆಹಾರ ದೊರೆಯದೇ ಇರುವ ಸ್ಥಿತಿಯನ್ನು ಹಸಿವು ಎನ್ನುತ್ತದೆ ವಿಶ್ವಸಂಸ್ಥೆ. ಅಪೌಷ್ಠಿಕತೆ, ಕುಂಠಿತ ಬೆಳವಣಿಗೆ, ಕಡಿಮೆ ತೂಕ ಈ ಎಲ್ಲವೂ ಆಹಾರದ ಕೊರತೆಯ ಸೂಚಿಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಅರ್ಥೈಸುತ್ತದೆ. ಭಾರತವೂ ಸೇರಿ ಎಲ್ಲಾ ದೇಶಗಳು ಈ ವ್ಯಾಖ್ಯಾನವನ್ನು ಒಪ್ಪಿಕೊಂಡಿವೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯ ದೇಶ ಎಂದೇ ಹೆಸರಾಗಿರುವ ಭಾರತದ ಮಟ್ಟಿಗೆ ಜೆಎಎಂಎ ನೆಟ್‌ವರ್ಕ್ ಓಪನ್ ಜರ್ನಲ್ 2024ರ ವರ್ಷದ ಆರಂಭದಲ್ಲಿ ಪ್ರಕಟವಾಗಿದ್ದ ವರದಿಯೊಂದು ಆಘಾತಕಾರಿಯಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಲಾದ ಅಧ್ಯಯನವು, ದೇಶದ 67 ಲಕ್ಷ ಶಿಶುಗಳಿಗೆ ಆಹಾರ ಇಲ್ಲ ಎಂದು ತಿಳಿಸಿತ್ತು. ಅಂದರೆ, ದೇಶದ 6ರಿಂದ 24 ತಿಂಗಳ ವಯಸ್ಸಿನ 67 ಲಕ್ಷ ಶಿಶುಗಳು 24 ಗಂಟೆಗಳಲ್ಲಿ ಯಾವುದೇ ಹಾಲು ಅಥವಾ ಘನ ಆಹಾರ ಅಥವಾ ಅರೆಘನ ಆಹಾರವನ್ನು ಸೇವಿಸಿರಲಿಲ್ಲ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ 92 ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಭಾರತವು, ಪಶ್ಚಿಮ ಆಫ್ರಿಕಾ ದೇಶಗಳ ನಂತರದ ಸ್ಥಾನ ಪಡೆದಿದೆ. ಭಾರತದ ಜನಸಂಖ್ಯೆಯ ಶೇಕಡಾ 13.7ರಷ್ಟು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಇದು ಸಾಕಷ್ಟು ಕ್ಯಾಲೋರಿ ಸೇವನೆಯನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೇ, ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ35.5ರಷ್ಟು ಮಕ್ಕಳು ಕುಂಠಿತಗೊಂಡಿದ್ದಾರೆ. ಇದು ದೀರ್ಘಕಾಲದ ಅಪೌಷ್ಠಿಕತೆಯನ್ನು ಸೂಚಿಸುತ್ತಿದೆ. ಅಲ್ಲದೇ ಶೇ18.7ರಷ್ಟು ಮಕ್ಕಳು ತೀವ್ರ ಅಪೌಷ್ಠಿಕತೆಯ ಸಂಕೇತವಾದ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಐದು ವರ್ಷದೊಳಗಿನ ಮರಣ ಪ್ರಮಾಣ ಶೇಕಡಾ 2.9ರಷ್ಟಿದ್ದು, ಇದಕ್ಕೆ ಭಾಗಶಃ ಅಪೌಷ್ಠಿಕತೆ ಮತ್ತು ಆರೋಗ್ಯ ರಕ್ಷಣೆಯ ಕೊರತೆಯೇ ಕಾರಣ.
ಜಗತ್ತಿನಾದ್ಯಂತ ಹಲವಾರು ಸಂಘ-ಸಂಸ್ಥೆಗಳು ‘ಹಂಗರ್ ರೀಲಿಫ್’ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ, ಬಡವರಿಗೆ ಆಹಾರವನ್ನು ವಿತರಿಸುವ ಗುರಿಯನ್ನು ಹೊಂದಿವೆ. ಹಾಗೆಯೇ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಪ್ರಪಂಚದಾದ್ಯಂತ ಜನವರಿ 3 ರಿಂದ 11ರವರೆಗೆ ಹಸಿವಿನ ವಿರುದ್ಧ ಹೋರಾಡುವ ಯೋಜನೆಯನ್ನು ಹಾಕಿಕೊಂಡಿದೆ. ಜೂನ್ 7, 1917ರಲ್ಲಿ ಚಿಕಾಗೋದ ಇಲಿನೊಯಿಸ್‌ದಲ್ಲಿ ಮೆಲ್ವಿನ್ ಜೋನ್ಸ್‌ರು ಆರಂಭಿಸಿದ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಜಗತ್ತಿನಾದ್ಯಂತ 210 ರಾಷ್ಟ್ರಗಳಲ್ಲಿ ತನ್ನ ಸಂಸ್ಥೆಗಳನ್ನು ಹೊಂದಿದ್ದು, 50 ಸಾವಿರಕ್ಕೂ ಹೆಚ್ಚು ಲಯನ್ಸ್ ಸಂಸ್ಥೆಗಳಲ್ಲಿ 14 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಭಾರತದಲ್ಲಿ 1956ರಲ್ಲಿ ಪ್ರಥಮ ಬಾರಿಗೆ ಮುಂಬೈನಲ್ಲಿ ಆರಂಭವಾಗಿ, 70 ವರ್ಷಗಳಿಂದ ನಿರಂತರ ಸೇವೆ ಮಾಡುತ್ತಿದೆ. ದೇಶದಲ್ಲಿ 6500ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದೆ. ಲಯನ್ಸ್ 317 ಬಿ ಜಿಲ್ಲೆಯು ಇಡೀ ಗೋವಾ ರಾಜ್ಯ ಮತ್ತು ಕರ್ನಾಟಕ ರಾಜ್ಯದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಉತ್ತರಕನ್ನಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ, ಬಳ್ಳಾರಿ ಮತ್ತು ರಾಯಚೂರಿನ ಕೆಲವು ಭಾಗಗಳನ್ನು ಒಳಗೊಂಡಿದೆ. ಈ ಲಯನ್ಸ್ ಜಿಲ್ಲೆಯು 110 ಲಯನ್ಸ್ ಸಂಸ್ಥೆಗಳನ್ನು ಹೊಂದಿದ್ದು, 4 ಸಾವಿರಕ್ಕೂ ಹೆಚ್ಚು ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಸಿವು ಮುಕ್ತ ಸಮಾಜ, ಅಂಧತ್ವ ನಿವಾರಣೆ, ಪರಿಸರ ಸಂರಕ್ಷಣೆ, ಮಧುಮೇಹ, ಕ್ಯಾನ್ಸರ್ ತಪಾಸಣೆ, ಶೈಕ್ಷಣಿಕ ಕಾರ್ಯಕ್ರಮ, ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಸೇವಾ ಕಾರ್ಯಗಳಲ್ಲಿ ಲಯನ್ಸ್ ಸಂಸ್ಥೆಗಳು ತೊಡಗಿಕೊಂಡಿವೆ. ಸಧ್ಯ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎ.ಪಿ.ಸಿಂಗ್ ಹಾಗೂ 317ಬಿ ಜಿಲ್ಲೆಯ ಗವರ್ನರ್‌ರಾಗಿ ಜೈ ಅಮೋಲ್ ನಾಯಕ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಹಾರ ದಾನ ಅಭಿಯಾನಗಳು, ಸಮುದಾಯ ಭೋಜನ ಕಾರ್ಯಕ್ರಮಗಳು, ಹಸಿವು ಪರಿಹಾರ ಕಿಟ್‌ಗಳು, ಸಂಚಾರಿ ವಾಹನಗಳ ಮೂಲಕ ಆಹಾರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಅಂತರರಾಷ್ಟ್ರೀಯ ಲಯನ್ ಸಂಸ್ಥೆಯು ಪ್ರಪಂಚದಾದ್ಯಂತ ಜನವರಿ 3, 2026 ರಿಂದ ಜನವರಿ 11ರವರೆಗೆ ಹಸಿವು ಮುಕ್ತ ಅಭಿಯಾನವನ್ನು ಏರಿ್ಡಸಿದೆ. “ಲಯನ್ಸ್ ಸಂಸ್ಥೆಗಳಂತೆ ಹೆಚ್ಚಿನ ಇನ್ನೀತರ ಸಂಘ-ಸಂಸ್ಥೆಗಳು, ಈ ಆಭಿಯಾನದಲ್ಲಿ ಪಾಲ್ಗೊಂಡರೆ ನಾವು ಜಗತ್ತನ್ನು ಪರಿವರ್ತಿಸಲು ಸಾಧ್ಯವಾಗುತ್ತದೆ. ಇದಕ್ಕೆ ಸರ್ಕಾರ, ಸಮಾಜ, ಖಾಸಗಿ ವಲಯ ಮತ್ತು ವ್ಯಕ್ತಿಗಳ ನಡುವೆ ನಿರಂತರ ಸಹಯೋಗದ ಅಗತ್ಯವಿದೆ” ಎಂದು ಲಯನ್ಸ್ 317ಬಿ ಜಿಲ್ಲೆಯ ರಾಜ್ಯಪಾಲ ಜೈ ಅಮೋಲ್ ನಾಯಕ್ ಹೇಳುತ್ತಾರೆ.
ಆಹಾರ ಪದಾರ್ಥಗಳ ಪೋಲು ತಪ್ಪಿಸುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಸಿವು ಮುಕ್ತ ಭಾರತ ಅಭಿಯಾನಕ್ಕೆ ಪ್ರತಿಯೊಬ್ಬ ನಾಗರಿಕರು ಕಾರ್ಯೋನ್ಮುಖರಾಗಬೇಕಿದೆ. ಕೃಷಿಯಲ್ಲಿ ತೊಡಗಲು ಯುವಕರಿಗೆ ಉತ್ತೇಜನ, ರೈತರಿಗೆ ಅಗತ್ಯ ಆರ್ಥಿಕ ಸಹಾಯ ದೊರೆಯಬೇಕಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲೂ ಕೃಷಿಯ ಬಗ್ಗೆ ಮಾಹಿತಿ ಅಳವಡಿಸಬೇಕು. ಒಟ್ಟಾರೆ ಕೃಷಿಯ ಬಗೆಗಿನ ಆಕರ್ಷಣೆ ಹೆಚ್ಚಿಸಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ. ಉತ್ಪಾದನೆ ಅಧಿಕವಾಗಿ, ಹಸಿವಿನ ಸಂಕಟ ನಿವಾರಣೆಯಾಗಲು ಸಾಧ್ಯ. ಹಲವಾರು ದೇವಾಲಯಗಳಲ್ಲಿ ಪ್ರತಿದಿನ ಅನ್ನ ಸಂತರೆ್ಣಯಂತಹ ಕಾರ್ಯಕ್ರಮಗಳು ನಡೆಯುತ್ತವೆ. ಹಲವು ಸಂಘ-ಸಂಸ್ಥೆಗಳು ಸಹ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕೆಲಸ ಮಾಡುತ್ತಿವೆ. ಹಸಿವಿನಿಂದ ನರಳುತ್ತಿರುವವರಿಗೆ ಅಗತ್ಯ ಆಹಾರವನ್ನು ನೀಡುವದು, ಆಹಾರದ ಕೊರತೆ ನೀಗಿಸುವದು, ಅಪೌಷ್ಟಿಕತೆ ವಿರುದ್ಧ ಹೋರಾಡುವದು, ಆಹಾರ ಭದ್ರತೆ ಸಾಧಿಸುವದು, ದವಸಧಾನ್ಯಗಳ ಉತ್ಪಾದನೆ ಹೆಚ್ಚಿಸುವದರೊಂದಿಗೆ ನಾವೆಲ್ಲರೂ ಹಸಿವಿನ ವಿರುದ್ಧ ಹೋರಾಡುವ ಪಣ ತೊಟ್ಟು ಕಾರ್ಯೋನ್ಮುಖರಾಗಬೇಕಾಗಿದೆ.
ಹುಟ್ಟಿದ ಪ್ರತಿ ಜೀವಿಗೂ ಬದುಕಲು, ಬೆಳೆಯಲು ಆಹಾರ ಬೇಕು. ಜಗತ್ತಿನಲ್ಲಿ ಸಂಪತ್ತು, ಸವಲತ್ತುಗಳು ಹೆಚ್ಚಾದಂತೆಲ್ಲ ಹಸಿವೂ ಕೂಡ ಹೆಚ್ಚುತ್ತಿದೆ. ಹಾಗೆಯೇ ಜಾಗತಿಕ ಸಂಘ ಸಂಸ್ಥೆಗಳು ಹಸಿವು ಮುಕ್ತ ಸಮಾಜ ನಿರ್ಮಾಣದ ಗುರಿ ಸಾಧನೆಗಾಗಿ ಶ್ರಮಿಸುತ್ತಿವೆ. ಅದರ ನಡುವೆಯೂ ಹಸಿವೆಯೆಂಬ ಹೆಬ್ಬಾವು ಮನುಷ್ಯ ಕುಲವನ್ನು ಕಾಡುತ್ತಿದೆ.
ಸುರೇಶ ಗುದಗನವರ
ಲೇಖಕರು
ಧಾರವಾಡ
9449294694
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 