ಹುಕ್ಕೇರಿ

90 ದಿನ ಮಿಡಿಯೇಷನ್ ಫಾರ ನೇಶನ್ ಅಭಿಯಾನ

90 ದಿನ ಮಿಡಿಯೇಷನ್ ಫಾರ ನೇಶನ್ ಅಭಿಯಾನ

ಪ್ರಯೋಜನ ಪಡೆದುಕೊಳ್ಳಲು ಕಕ್ಷಿದಾರರಿಗೆ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಕರೆ 

ಹುಕ್ಕೇರಿ 16: ದೇಶಾದ್ಯಂತ ಇದೇ ತಿಂಗಳು ದಿ. 1ರಿಂದ ಅಕ್ಟೋಬರ್ ದಿನಾಂಕ 7ರವರೆಗೆ ನ್ಯಾಯಾಲಯದ ವ್ಯಾಜ್ಯಗಳನ್ನು ಮಧ್ಯಸ್ಥಿಕೆದಾರರ ಮೂಲಕ ಸಂಧಾನ ಪ್ರಕ್ರಿಯೆ ಅಂದರೆ “ಮಿಡಿಯೇಷನ್ ಫಾರ ನೇಶನ್‌” ಎಂಬ ಅಭಿಯಾನವನ್ನು 90 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ. ಕಾರಣ ಕಕ್ಷಿದಾರರು ಇದರ ಪ್ರಯೋಜನ ಪಡೆಯುವಂತೆ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.  

ಸೋಮವಾರದಂದು ಸಂಜೆ ಸ್ಥಳೀಯ ನ್ಯಾಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯದ ಆದೇಶದಂತೆ 7-1-2025ರ ಮುಂಚೆ ಬರುವ ನ್ಯಾಯಾಲಯದ ವ್ಯಾಜ್ಯಗಳನ್ನು ಕಕ್ಷಿದಾರರು ಅಪೇಕ್ಷಿಸಿದಲ್ಲಿ ಅವರ ಕೋರಿಕೆ ಮೇರೆಗೆ ಸಂಧಾನಕರರಿಗೆ ವರ್ಗಾಯಿಸಲಾಗುತ್ತದೆ ಎಂದರು.ಯಾವುದೋ ಕಾರಣದಿಂದ ತಂಟೆ ತಕರಾರಿನಿಂದ ನ್ಯಾಯಾಲಯದ ಹಂತಕ್ಕೆ ವ್ಯಾಜ್ಯಗಳು ತಲುಪಿರುತ್ತವೆ.ನ್ಯಾಯಾಲಯದ ನಿಯಮಾವಳಿ ಪ್ರಕಾರ ಕಾನೂನಾತ್ಮಕವಾಗಿ ಇತ್ಯರ್ಥ ಪಡಿಸಿದಲ್ಲಿ ಅದರಿಂದ ಅವರಲ್ಲಿ ಉಂಟಾಗಿರುವ ವೈಷಮ್ಯ ಮತ್ತಷ್ಟು ಉಲ್ಭಣಿಸುತ್ತದೆ.ಅದಕ್ಕಾಗಿ ಸಂಧಾನ ಪ್ರಕ್ರಿಯೆ ಮೂಲಕ ವ್ಯಾಜ್ಯ ಪರಿಹರಿಸಿದಾಗ ಉತ್ತಮ ಸ್ವಾಸ್ಥ್ಯ ಮತ್ತು ಸೌಹಾರ್ದತೆ ಉಳಿಯುತ್ತದೆ ಎಂದು ಇಂತಹ ಅಭಿಯನ ಆಯೋಜಿಸಲಾಗಿದೆ ಎಂದರು. 

 ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಅವರು ಮಾತನಾಡಿ ವ್ಯಾಜ್ಯದ ಇಬ್ಬರು ಕಕ್ಷಿದಾರರು ಸಮ್ಮತಿಸಿಕೊಳ್ಳುವಂತೆ ಮತ್ತು ನ್ಯಾಯ ಸಮ್ಮತವಾದ ನಿರ್ಣಯವನ್ನು ಮಧ್ಯಸ್ಥಿಕೆ ವಹಿಸಿದ ಸಂಧಾನಕಾರರು ತೆಗೆದುಕೊಳ್ಳುತ್ತಾರೆ. ನಂತರ ಆ ಸಮ್ಮತಿ ನಿರ್ಣಯವನ್ನು ನ್ಯಾಯಾಲಯದ ಮುಂದೆ ಮಂಡಿಸುತ್ತಾರೆ. ನ್ಯಾಯಾಧೀಶರು ವ್ಯಾಜ್ಯದಾರರನ್ನು ಮತ್ತೊಮ್ಮೆ ಸಮ್ಮತಿ ಕುರಿತು ಪ್ರಶ್ನಿಸಿ ಕಕ್ಷಿದಾರರು ಒಪ್ಪಿಕೊಂಡ ಬಳಿಕ ಅವಾರ್ಡ ಅಥವಾ ಡಿಕ್ರಿ ಆದೇಶ ನೀಡುತ್ತಾರೆ. ಇಬ್ಬರು ಕಕ್ಷಿದಾರರು ಸಮ್ಮತಿಸಿ ನಿರ್ಣಯಿಸಿ ತೀರ್ಮಾನವಾದ ಬಳಿಕ ಮುಂದೆ ಈ ವ್ಯಾಜ್ಯದ ಕುರಿತು ಎಲ್ಲಿಯೂ ಪ್ರಸ್ತಾಪ ಅಥವಾ ದೂರು ದಾಖಲಿಸಲು ಬರುವುದಿಲ್ಲವೆಂದರು. 

 ಮಧ್ಯಸ್ಥಿಕೆದಾರರಾಗಿ ಹಿರಿಯ ನ್ಯಾಯವಾದಿ ಬಿ.ಬಿ.ಪಾಸಪ್ಪಗೋಳ, ಪಿ.ಎಸ್‌.ಮುತಾಲಿಕ ಮತ್ತು ಸಿ.ಎಂ.ಸಂಸುದ್ದಿ ನೇಮಕವಾಗಿದ್ದಾರೆಂದು ತಿಳಿಸಿದರು. 

ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಕಾರ್ಯದರ್ಶಿ ಎಸ್‌.ಜಿ.ನದಾಫ, ಬಸವರಾಜ ಹುಂಡೇಕಾರ ಮತ್ತಿತರರಿದ್ದರು. 

ಕೌಟುಂಬಿಕ ಸಮಸ್ಯೆ, ದೌರ್ಜನ್ಯ, ಚಿಕ್ಕಪುಟ್ಟ ಗಲಾಟೆ ಅಪರಾಧ ಪ್ರಕರಣಗಳು, ಸಹಕಾರಿ ಸಂಘ ಸಂಸ್ಥೆಗಳ ಹಣಕಾಸಿನ ವ್ಯವಹಾರ, ಜಮೀನು ತಂಟೆ ತಕರಾರು ಸೇರಿದಂತೆ ಮತ್ತಿತರ ವ್ಯಾಜ್ಯಗಳು ಸಂಧಾನ ಪ್ರಕ್ರಿಯೆಯಲ್ಲಿ ಬರುತ್ತವೆ. 


ಸುದ್ದಿ ಓದಿ