ಚೀನಾದಲ್ಲಿ ರೈಲು ಹರಿದು 9 ರೈಲ್ವೆ ಕಾರ್ಮಿಕರು ಸಾವು
ಬೀಜಿಂಗ್, ಜೂನ್ 4: ವಾಯವ್ಯ ಚೀನಾ ಭಾಗದ ಗನ್ಸು ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲೊಂದು ಹಳಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಹರಿದು 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಈ ಘಟನೆ ಶುಕ್ರವಾರ ಬೆಳಿಗ್ಗೆ 5.20ಕ್ಕೆ ನಡೆದಿದೆ. ಕ್ಷಿನ್ ಜಿಯಾಂಗ್ ಉಯ್ ಗುರ್ ಸ್ವಾಯತ್ತ ಪ್ರಾಂತ್ರದ ಆಡಳಿತ ಕೇಂದ್ರವಾದ ಉರುಮ್ ಕ್ವಿ ನಗರದಿಂದ ಜೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್ ಜೌ ನಗರಕ್ಕೆ ಹೊರಟಿದ್ದ ರೈಲು ಗನ್ಸು ಪ್ರಾಂತ್ಯದ ಜಿನ್ ಚಾಂಗ್ ನಗರದ ಬಳಿ ಕೆಲಸದಲ್ಲಿ ತೊಡಗಿದ್ದ ರೈಲ್ವೆ ಕಾರ್ಮಿಕರ ಮೇಲೆ ಹರಿದಿದೆ ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಘಟನೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.