ಭಾರತದಿಂದ ಬಾಂಗ್ಲಾದೇಶಕ್ಕೆ 160 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ
ಜುಲೈ 22 : ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರ ‘ನೆರೆ ರಾಷ್ಟ್ರ ಮೊದಲು ನೀತಿ’ಯಂತೆ ಭಾರತದಿಂದ ಪೆಟ್ರಪೋಲ್ ಚೆಕ್ ಪೋಸ್ಟ್ ಮೂಲಕ ಗುರುವಾರ ಸುಮಾರು 160 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಗುರುವಾರ ಬಾಂಗ್ಲಾದೇಶಕ್ಕೆ ಆಗಮಿಸಿದೆ.
11 ಟ್ಯಾಂಕರ್‌ಗಳಲ್ಲಿ ಬಾಂಗ್ಲಾದೇಶದ ಮೂರು ಕಂಪೆನಿಗಳ ಮೂಲಕ ಈ ಆಮ್ಲಜನಕವನ್ನು ಸಾಗಿಸಲಾಗಿದೆ.
ಬಾಂಗ್ಲಾದೇಶದ ಆಸ್ಪತ್ರೆಗಳಲ್ಲಿ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಐಸಿಪಿ ಪೆಟ್ರಪೋಲ್ ಅಧಿಕಾರಿಗಳು ವೈದ್ಯಕೀಯ ಆಮ್ಲಜನಕವನ್ನು ರಫ್ತು ಮಾಡಲು ಹಸಿರು ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ.
ಈಗಾಗಲೇ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೆ ಔಷಧ ಮತ್ತು ವೈದ್ಯಕೀಯ ನೆರವನ್ನು ಭಾರತ ಒದಗಿಸಿದ್ದು, ಇದೀಗ ಜೀವ ಕಾಪಾಡಲು ತುರ್ತಾಗಿ ಬಳಸುವ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.