ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಎಂಜಿನಿಯರ್ ವಿಶ್ವನಾಥ್ ಹಿರೇಮಠಗೆ ಆತ್ಮೀಯ ವಿದಾಯ ಸನ್ಮಾನ
ಹುಕ್ಕೇರಿ 03: ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಎಂಜಿನಿಯರ್ ಆಗಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಶ್ವನಾಥ್ ಹಿರೇಮಠ ಅವರಿಗೆ ಇಲಾಖೆಯ ವತಿಯಿಂದ ಆತ್ಮೀಯ ವಿದಾಯ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಐ.ಎಲ್. ಬೆಳವಿ, ಹಿರೇಮಠ ಅವರ ಸೇವಾ ಅವಧಿಯಲ್ಲಿ ತೋರಿದ ನಿಷ್ಠೆ, ಕಾರ್ಯಕ್ಷಮತೆ ಮತ್ತು ಜವಾಬ್ದಾರಿತನವನ್ನು ಶ್ಲಾಘಿಸಿದರು. ಸಾರ್ವಜನಿಕರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸಿ, ನೀಡಲಾದ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, “ರಸ್ತೆ, ಸೇತುವೆ ಹಾಗೂ ಕಟ್ಟಡ ಕಾಮಗಾರಿಗಳ ನಿರ್ವಹಣೆಯಲ್ಲಿ ಹಿರೇಮಠ ಅವರ ಶ್ರಮ ಅಮೂಲ್ಯವಾಗಿದೆ. ಅವರ ನಿವೃತ್ತಿ ಜೀವನ ಆರೋಗ್ಯ, ಶಾಂತಿ ಮತ್ತು ಸಂತೋಷದಿಂದ ಕೂಡಿರಲಿ” ಎಂದು ಶುಭಾಶಯ ಕೋರಿದರು.
ಸನ್ಮಾನ ಸ್ವೀಕರಿಸಿದ ವಿಶ್ವನಾಥ್ ಹಿರೇಮಠ ಅವರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಇಲಾಖೆಯಲ್ಲಿ ಪಡೆದ ಅನುಭವಗಳು ಸದಾ ಸ್ಮರಣೀಯವಾಗಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ. ಹುಕ್ಕೇರಿ, ಪ್ರವಿ?ಣ ಮಾದ್ಯಾಳ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.