ಪಾಕಿಸ್ತಾನದಲ್ಲಿ ಮಳೆ, ಬಿರುಗಾಳಿ ದುರಂತ: 5 ಸಾವು, ಮನೆಗಳಿಗೆ ಹಾನಿ
ಇಸ್ಲಾಮಾಬಾದ್, ಜೂನ್ 13 : ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಮಳೆ ಮತ್ತು ಗಾಳಿ ,ಬಿರುಗಾಳಿ ನೈಸರ್ಗಿಕ ದುರಂತದಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ.ಈ ಘಟನೆಯಲ್ಲಿ ಇತರೆ 6 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ತಿಳಿಸಿದೆ. ಭಾರಿ ಮಳೆಯೊಂದಿಗೆ ಬಿರುಗಾಳಿ ಬೀಸಿದಾಗ ಎಂಟು ಮನೆಗಳು ಸಹ ಕುಸಿದಿವೆ ಎಂದು ಪಿಡಿಎಂಎ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಗಳಲ್ಲಿ ಹವಾಮಾನ ಸಂಬಂಧಿತ ಕೆಲವು ತುರ್ತು ಪರಿಸ್ಥಿತಿಗಳು ಸಂಭವಿಸಿದಲ್ಲಿ ಪರಿಹಾರ ಕಾರ್ಯ ಒದಗಿಸಲು ಜಾಗರೂಕರಾಗಿರಲು ಪ್ರಾಂತ್ಯದ ಎಲ್ಲಾ ಪ್ರದೇಶಗಳ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಪಿಡಿಎಂಎ ತಿಳಿಸಿದೆ. ಈ ನಡುವೆ ಚಿತ್ರಾಲ್ ಜಿಲ್ಲೆಯ ಪ್ರವಾಸಿ ಆಕರ್ಷಣೆಯ ಪ್ರಮುಖ ಹೆದ್ದಾರಿಗಳಲ್ಲಿ ಒಂದನ್ನು ಹಾದುಹೋಗುವ ನದಿಯ ಸವೆತದಿಂದಾಗಿ ಪ್ರಯಾಣ ನಿರ್ಬಂಧಿಸಲಾಗಿದೆ, ಮತ್ತು ವಾಹನಗಳಿಗೆ ಪರ್ಯಾಯ ಮಾರ್ಗ ನಿಗದಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.