ಇಂಡೋನೇಷ್ಯಾ: ಎರಡು ಭೂಕುಸಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆ
ಮಾಸ್ಕೋ, ಜನವರಿ 12:ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಮಂಗಳವಾರ ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯುವುದರೊಂದಿಗೆ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ವಾರಾಂತ್ಯದಲ್ಲಿ ಸಂಭವಿಸಿದ ಎರಡು ಭೂಕುಸಿತ ಘಟನೆಗಳಲ್ಲಿ ಬಲಿಯಾದವರ ಸಂಖ್ಯೆ ಮಂಗಳವಾರ 16 ಕ್ಕೆ ಏರಿದೆ ಎಂದು ಮಾಧ್ಯಮಗಳು ತಿಳಿಸಿವೆ.ರಾಜಧಾನಿ ಜಕಾರ್ತಾದ ಆಗ್ನೇಯ ದಿಕ್ಕಿನಲ್ಲಿರುವ ಪಶ್ಚಿಮ ಜಾವಾ ಪ್ರಾಂತ್ಯದ ಸಿಹಾಂಜುವಾಂಗ್ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಶನಿವಾರ ಭೂಕುಸಿತಗಳು ಸಂಭವಿಸಿದ್ದವು. ಪತ್ತೆ ಮತ್ತು ರಕ್ಷಣಾ ಸಿಬ್ಬಂದಿ ಬದುಕುಳಿದವರನ್ನು ಶೋಧಿಸುತ್ತಿದ್ದಾಗ ಎರಡನೇ ಭೂಕುಸಿತ ಸಂಭವಿಸಿದೆ.ರಾಷ್ಟ್ರೀಯ ಸುದ್ದಿ ಸಂಸ್ಥೆ ಅಂಟಾರಾ ವರದಿಯಂತೆ, 23 ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ಪ್ರಾದೇಶಿಕ ಶೋಧ ಮತ್ತು ರಕ್ಷಣಾ ಪ್ರಾಧಿಕಾರ ತಿಳಿಸಿದೆ. ಬದುಕುಳಿದವರನ್ನು ಪತ್ತೆ ಮಾಡಲು ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.