ಜೋ ಬೈಡನ್ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಮೈಕ್ ಪೆನ್ಸ್
ವಾಷಿಂಗ್ಟನ್, ಜ 10: ಅಗ್ರರಾಜ್ಯ ಅಮೆರಿಕಾದ 46 ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬೈಡೆನ್ ಈ ತಿಂಗಳ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದು, ಉಪಾಧ್ಯಕ್ಷ ಮೈಕ್ ಪೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಜೋ ಬೈಡನ್ ಅವರ ಆಹ್ವಾನವನ್ನು ಪೆನ್ಸ್ ಎದುರು ನೋಡುತ್ತಿದ್ದಾರೆ ಎಂದು ಶ್ವೇತ ಭವನ ವಕ್ತಾರರೊಬ್ಬರು ತಿಳಿಸಿದ್ದಾರೆ. ಆತ್ತ .. ಜೋ ಬೈಡೆನ್ ಸಹ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೈಕ್ ಪೆನ್ಸ್ ಪಾಲ್ಗೊಳ್ಳಬೇಕೆಂದು ಕೋರಿದ್ದು, ಅವರ ಆಗಮನ ಗೌರವವೆಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.
ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಟ್ರಂಪ್ ... ಜೋ ಬೈಡೆನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಹಷ್ಟು ಮಂದಿ ಜನವರಿ 20ರ ಜೋ ಬೈಡನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ಕೇಳುತ್ತಿದ್ದಾರೆ. ಆದರೆ ಆ ಸಮಾರಂಭಕ್ಕೆ ತಾವು ಹೋಗುವುದಿಲ್ಲ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಜೋ ಬೈಡನ್, ಟ್ರಂಪ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟ್ರಂಪ್ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿರುವ ಬೈಡನ್ , ಅವರು ಸಮಾರಂಭಕ್ಕೆ ಬರದಿರುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಉಪಾಧ್ಯಕ್ಷ ಪೆನ್ಸ್ ಆಗಮಿಸಿದರೆ ಅದೊಂದು ಗೌರವ ಎಂದು ತಾವು ಪರಿಗಣಿಸುವುದಾಗಿ ಬೈಡನ್ ಹೇಳಿದ್ದಾರೆ.ಪೆನ್ಸ್ ಕೂಡ ಬೈಡೆನ್ ಅವರ ಆಹ್ವಾನವನ್ನು ಎದುರು ನೋಡುತ್ತಿದ್ದು, ಇದರೊಂದಿಗೆ, ಪೆನ್ಸ್ ಭಾಗಿಯಾಗುವುದು ಖಚಿತವಾಗಿದೆ. ಹಾಗಿದ್ದಲ್ಲಿ, ಆಂಡ್ರೂ ಜಾನ್ಸನ್ ನಂತರ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರಾಗಲಿರುವ ಟಂಪ್ ಎರಡನೇ ಅಮೆರಿಕಾ ಅಧ್ಯಕ್ಷರೆಂಬ ದಾಖಲೆಗೆ ಸೇರಲಿದ್ದಾರೆ. ಕ್ಯಾಪಿಟಲ್ ಭವನದ ಮೇಲಿನ ದಾಳಿಯ ನಂತರ ಟ್ರಂಪ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸುಗಮ ಅಧಿಕಾರ ಹಸ್ತಾಂತರಕ್ಕೆ ನೆರವಾಗಲು ಒಪ್ಪಿಕೊಂಡು, ಪರೋಕ್ಷವಾಗಿ, ಟ್ರಂಪ್ ಸೋಲನ್ನು ಒಪ್ಪಿಕೊಂಡಿದ್ದಾರೆ.