ಭಾರತಕ್ಕೆ ಎಲ್ಲರೀತಿಯ ವೈದ್ಯಕೀಯ ನೆರವು: ಜೋ ಬೈಡನ್
ವಾಷಿಂಗ್ಟನ್, ಏ 28:ಕೋವಿಡ್ ಸಾಂಕ್ರಾಮಿಕ ಪ್ರಕರಣಗಳ ತೀವ್ರ ಏರಿಕೆಯಿಂದ ಸಂಕಷ್ಟದ ಪರಿಸ್ಥಿತಿ ಎದುರುಸುತ್ತಿರುವ ಭಾರತಕ್ಕೆ ರೆಮ್ಡೆಸಿವಿರ್ ಹಾಗೂ ಇತರ ಜೀವ ರಕ್ಷಕ ಔಷಧಗಳು ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ನೆರವನ್ನು ನಮ್ಮ ದೇಶ ಕಲ್ಪಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ಶಾರೆ.ಭಾರತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಒಂದು ದಿನದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ಅಮೆರಿಕ ದೊಡ್ಡ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿದ್ದಾಗ ಭಾರತ ಪ್ರಮುಖ ಔಷಧಿಗಳನ್ನು ಪೂರೈಸುವ ಮೂಲಕ ತಮ್ಮ ದೇಶಕ್ಕೆ ಸಹಾಯ ಮಾಡಿದೆ ಎಂದು ಅವರು ಸ್ಮರಿಸಿದ್ದಾರೆ.
ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೋಮವಾರ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಪರಿಸ್ಥಿತಿ ನಿಭಾಯಿಸಲು, ಸೋಂಕಿತರು ಶೀಘ್ರ ಚೇತರಿಕೆಗೆ ಅಗತ್ಯವಾಗಿರುವ ರೆಮ್‌ಡೆಸಿವಿರ್ ಹಾಗೂ ಇತರ ಜೀವರಕ್ಷಕ ಔಷಧಿಗಳನ್ನು ತಕ್ಷಣವೇ ಭಾರತಕ್ಕೆ ಒದಗಿಸಲಿದ್ದೇವೆ ಎಂದು ಬೈಡನ್ ಹೇಳಿದ್ದಾರೆ.ಲಸಿಕೆ ತಯಾರಿಸಲು ಅಗತ್ಯವಾದ ಯಾಂತ್ರಿಕ ಭಾಗಗಳನ್ನು ಕಳುಹಿಸುತ್ತಿದ್ದೇವೆ. ಭಾರತಕ್ಕೆ ಯಾವಾಗ ಕೋವಿಡ್ ಲಸಿಕೆಗಳನ್ನು ಕಳಿಸಬೇಕು ಎಂಬ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದ್ದು, ಲಸಿಕೆ ಪೂರೈಸಬೇಕು ಎಂಬುದು ಅಮೆರಿಕಾದ ಉದ್ದೇಶವಾಗಿದೆ ಎಂದು ಬೈಡನ್ ತಿಳಿಸಿದ್ದಾರೆ.