ʼಸ್ಪುಟ್ನಿಕ್ ವಿʼ ಲಸಿಕೆ ಅನುಮೋದನೆಗೆ ಇಂದು ತಜ್ಞರ ಸಭೆ
ನವದೆಹಲಿ, ಮಾ 31: ದೇಶದಲ್ಲಿ ಶೀಘ್ರದಲ್ಲೇ ಮತ್ತೊಂದು ಕೊರೊನಾ ತಡೆ ಲಸಿಕೆ ಲಭ್ಯವಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ರಷ್ಯಾ ಅಭಿವೃದ್ಧಿಪಡಿಸಿದ 'ಸ್ಪುಟ್ನಿಕ್ ವಿ' ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಂಬಂಧ ಕೇಂದ್ರ ತಜ್ಞರ ಸಮಿತಿ ಇಂದು ಸಭೆ ಸೇರಲಿದೆ. ತಜ್ಞರ ಸಮಿತಿ ಹಸಿರು ನಿಶಾನೆ ನೀಡಿದರೆ, ಕೆಲವೇ ದಿನಗಳಲ್ಲಿ ಈ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವ ಸಾಧ್ಯತೆಯಿದೆ ವಿಶ್ವಸನೀಯ ಮೂಲಗಳು ಹೇಳಿವೆ.
ರಷ್ಯಾದ ಆರ್ ಡಿ ಐ ಎಫ್ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಿ, ಮಾರಾಟ ಮಾಡಲು ಡಾ. ರೆಡ್ಡೀಸ್ ಲ್ಯಾಬೊರೇಟರಿಸ್ ಒಪ್ಪಂದ ಮಾಡಿಕೊಂಡಿದೆ. 'ಸ್ಪುಟ್ನಿಕ್ ವಿ' ಲಸಿಕೆ ಕುರಿತು ಭಾರತದಲ್ಲಿ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಇತ್ತೀಚಿಗೆ ಡಾ. ರೆಡ್ಡೀಸ್ ನಡೆಸಿದೆ. ಆ ಪರೀಕ್ಷೆಗಳ ಸುರಕ್ಷತೆ ಮತ್ತು ರೋಗನಿರೋಧಕತೆಯ ಬಗ್ಗೆ ಈಗಾಗಲೇ ಭಾರತ ಔಷಧ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಿರುವ ಡಾ. ರೆಡ್ಡೀಸ್, ಲಸಿಕೆ ಉತ್ಪಾದನೆ ಹಾಗೂ ತುರ್ತು ಬಳಕೆಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ದತ್ತಾಂಶಗಳನ್ನು ಕೇಂದ್ರ ತಜ್ಞರ ತಂಡ ಇಂದು ವಿಶ್ಲೇಷಿಸಲಿದೆ.
ಪರವಾನಗಿ ಲಭಿಸಿದ ತಕ್ಷಣದಿಂದಲೇ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ಸ್ಪುಟ್ನಿಕ್ ವಿ' .. ಎರಡು ಡೋಸ್ ಲಸಿಕೆಯಾಗಿದ್ದು, ಮೊದಲ ಡೋಸ್ ಪಡೆದುಕೊಂಡ 21 ದಿನಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಬೇಕು. ಲಸಿಕೆ ಶೇಕಡಾ 90 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್ ಲೇಖನ ಪ್ರಕಟಿಸಿದೆ. ಮತ್ತೊಂದೆಡೆ, ರಷ್ಯಾದ ಆರ್‌ಡಿಐಎಫ್ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗಾಗಿ ಇನ್ನೂ ನಾಲ್ಕು ಸ್ಥಳೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.