ನೈಜರ್‌ನಲ್ಲಿ ಪೈಶಾಚಿಕ ದಾಳಿ: ಕನಿಷ್ಠ 58 ನಾಗರಿಕರು ಸಾವು
ನಿಯಾಮೆ,ನೈಜರ್ ಮಾರ್ಚ್ 17 : ಇಲ್ಲಿನ ಟಿಲ್ಲಾಬೆರಿ ಪ್ರದೇಶದಲ್ಲಿ ವಾರದ ಸಂತೆಗೆ ಹೋಗಿ ವಾಪಸ್ಸಾಗುತ್ತಿದ್ದ ಪ್ರಯಾಣಿಕರನ್ನು ಹೊತ್ತ ನಾಲ್ಕು ವಾಹನಗಳ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ ಕನಿಷ್ಠ 58 ಜನರು ಸಾವನ್ನಪ್ಪಿದ್ದಾರೆ ಎಂದು ನೈಜರ್ ಸರ್ಕಾರ ಮಂಗಳವಾರ ತಿಳಿಸಿದೆ.ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ದಾಳಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.ಅಪರಿಚಿತ ದಾಳಿಕೋರರು ಸಂತೆಯಿಂದ ಚಿನೆಡೊಗರ್ ಮತ್ತು ಡೇರಿ-ಡೇ ಗ್ರಾಮಗಳಿಗೆ ಹಿಂತಿರುಗಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು, 58 ಅಮಾಯಕರು ಸಾವನ್ನಪ್ಪಿದ್ದು, ಇತರ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಸರ್ಕಾರ ತಿಳಿಸಿದೆ.ಹೇಯ ಕೃತ್ಯ ಖಂಡಿಸಿ ಮತ್ತು ಮೃತರಿಗೆ ಸಂತಾಪ ಸೂಚಿಸಿ ನೈಜರ್ ನಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ತಿಲ್ಲಬೆರಿ ಪ್ರದೇಶದಲ್ಲಿ ಮೊದಲ ಸುತ್ತಿನ ಅಧ್ಯಕ್ಷೀಯ ಚುನಾವಣೆಯ ನಂತರ ಸುಮಾರು 100 ನಾಗರಿಕರು ದಾಳಿಯೊಂದರಲ್ಲಿ ಸಾವನ್ನಪ್ಪಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿಗಳನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.