ಹೊಸ ವಿವಾದಗಳ ಪರಿಹಾರಕ್ಕೆ ಭಾರತ,ಚೀನಾ ಮಾರ್ಗ ಕಂಡೊಳ್ಳುವುದು ಅಗತ್ಯ- ಪುಟಿನ್
ಮಾಸ್ಕೊ, ಜೂನ್ 5: ತಮ್ಮ ನಡುವಿನ ಹೊಸ ವಿವಾದಗಳನ್ನು ಪರಿಹರಿಸಿಕೊಳ್ಳಲು ಮಾರ್ಗವೊಂದನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪ್ರಾದೇಶಿಕವಲ್ಲದ ರಾಷ್ಟ್ರಗಳು ಇದರಲ್ಲಿ ಮಧ್ಯಪ್ರವೇಶಿಸಕೂಡದು ಎಂದು ಹೇಳಿದ್ದಾರೆ. ಶುಕ್ರವಾರ ಸೆಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ಒಕ್ಕೂಟದಲ್ಲಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಪುಟಿನ್, ಪ್ರಧಾನಿ ನರೇಂದ್ರಮೋದಿ ಮತ್ತು ಚೀನಾ ಪ್ರಧಾನಿ ಕ್ಸಿ ಜಿನ್‍ಪಿಂಗ್ ಜವಾಬ್ದಾರಿಯತ ವ್ಯಕ್ತಿಗಳಾಗಿದ್ದು, ಇಬ್ಬರೂ ಪರಸ್ಪರ ಹೆಚ್ಚು ಗೌರವ ಹೊಂದಿದ್ದಾರೆ ಎಂದು ಹೇಳಿದ್ದಾರೆ. ‘ತಮ್ಮ ರಾಷ್ಟ್ರಗಳ ನಡುವಿನ ಸಮಸ್ಯೆಗಳು ಮತ್ತು ವಿಷಯಗಳನ್ನು ಪರಿಹರಿಸಿಕೊಳ್ಳಲು ಮಾರ್ಗೋಪಾಯ ಕಂಡುಕೊಳ್ಳುವುದು ಅಗತ್ಯವೆನಿಸುತ್ತಿದೆ. ಆದರೆ, ಪ್ರಾದೇಶಿಕವಲ್ಲದ ದೇಶಗಳು ಇದಕ್ಕೆ ಅಡ್ಡಿಯಾಗದಿರುವುದು ಅತಿ ಮುಖ್ಯವಾಗಿದೆ.’ ಪುಟಿನ್ ಅವರನ್ನು ಉಲ್ಲೇಖಿಸಿ ರಷ್ಯಾ ಸುದ್ದಿಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. ಪೂರ್ವ ಲಡಾಕ್ ನಲ್ಲಿ ನ ಗಡಿ ಬಿಕ್ಕಟ್ಟು ಬಗೆಹರಿಸಲು ಭಾರತ ಮತ್ತು ಚೀನಾ ನಡುವೆ ಈವರೆಗೆ ಕೋರ್ ಕಮಾಂಡರ್ ಗಳ ನಡುವೆ 10 ಸುತ್ತುಗಳ ಮಾತುಕತೆ ನಡೆದಿದೆ. ಗಡಿಯಲ್ಲಿ ಶೀಘ್ರವೇ ಸೇನೆಗಳ ಹಿಂತೆಗೆವೊಂದೇ ಶಾಂತಿ ಮತ್ತು ಪ್ರಶಾಂತತೆ ಸ್ಥಾಪನೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಪ್ರಗತಿಗೆ ಮಾರ್ಗವಾಗಿದೆ ಎಂದು ಗುರುವಾರ ವಿದೇಶಾಂಗ ಸಚಿವಾಲಯ ಹೇಳಿತ್ತು.