ಅಂತರರಾಷ್ಟ್ರೀಯ

ಬ್ಲಿಂಕೆನ್ ಭೇಟಿ ಮಾಡಿದ ಜೈಶಂಕರ್‍ : ಕೋವಿಡ್ ಪರಿಹಾರ, ಭಾರತ-ಪೆಸಿಫಿಕ್‍ ವಿಷಯಗಳ ಚರ್ಚೆ

ಬ್ಲಿಂಕೆನ್ ಭೇಟಿ ಮಾಡಿದ ಜೈಶಂಕರ್‍ : ಕೋವಿಡ್ ಪರಿಹಾರ, ಭಾರತ-ಪೆಸಿಫಿಕ್‍ ವಿಷಯಗಳ ಚರ್ಚೆ

ವಾಷಿಂಗ್ಟನ್‍, ಮೇ 29:ಅಮೆರಿಕ ಪ್ರವಾದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಅಲ್ಲಿನ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್‍ ಅವರನ್ನು ಭೇಟಿ ಮಾಡಿ, ಕೋವಿಡ್ -19 ಪರಿಹಾರ, ಮ್ಯಾನ್ಮಾರ್ ನಲ್ಲಿ ಕ್ಷಿಪ್ರಕ್ರಾಂತಿ, ಹವಾಮಾನ ಬದಲಾವಣೆ ಮತ್ತು ಭಾರತ-ಫೆಸಿಫಿಕ್‍ ಪ್ರಾಂತ್ಯದಲ್ಲಿ ಸಹಕಾರ ಬಲವರ್ಧನೆ ಬಗ್ಗೆ ಚರ್ಚಿಸಿದ್ದಾರೆ. ‘ಭಾರತದ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರೊಂದಿಗೆ ನಡೆಸಿದ ಚರ್ಚೆಯಲ್ಲಿ ವಿದೇಶಾಂಗ ಸಚಿವ ಆಂಟೊನಿ ಜೆ ಬ್ಲಿಂಕೆನ್‍, ಭಾರತ-ಅಮೆರಿಕ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆ ಹೆಚ್ಚಿಸುವ ಅಮೆರಿಕದ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ. ಇಬ್ಬರೂ ನಾಯಕರು ಕೋವಿಡ್ ಪರಿಹಾರ, ಕ್ವಾಡ್ ಮೂಲಕ ಭಾರತ-ಫೆಸಿಪಿಕ್‍ ಸಹಕಾರ ಬಲಪಡಿಸುವ ಪ್ರಯತ್ನಗಳು,ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ  ಬಹುಪಕ್ಷೀಯ ಸಹಕಾರ ವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.’ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್‍ ಪ್ರೈಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 ಮ್ಯಾನ್ಮಾರ್ (ಬರ್ಮಾ)ನಲ್ಲಿ ಕ್ಷಿಪ್ರಕ್ರಾಂತಿ, ಪ್ರಾದೇಶಿಕ ಬೆಳವಣಿಗೆಗಳು, ಆಫ್ಘಾನಿಸ್ತಾನಕ್ಕೆ ನೆರವು ಮುಂದುವರಿಕೆ ವಿಷಯಗಳನ್ನೂ ಚರ್ಚಿಸಿರುವ ಇಬ್ಬರೂ ನಾಯಕರು, ಆರ್ಥಿಕ ಮತ್ತು ಪ್ರಾದೇಶಿಕ ಭದ್ರತಾ ಆದ್ಯತೆಗಳ ಕುರಿತು ಸಹಕಾರ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕೆನ್‍, ಕೋವಿಡ್ ವಿರುದ್ಧ ಹೋರಾಟಕ್ಕೆ ಭಾರತ-ಅಮೆರಿಕ ಒಂದಾಗಿವೆ. ಪ್ರಾದೇಶಿಕವಾಗಿ ಮತ್ತು ವಿಶ್ವಾದ್ಯಂತದ ಅನೇಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆಯಲ್ಲಿ ಕ್ವಾಡ್‍ ಮತ್ತು ಇತರ ಸಂಸ್ಥೆಗಳ ಮೂಲಕ ಎರಡೂ ದೇಶಗಳು ನೇರವಾಗಿ ಒಟ್ಟಾಗಿ ಪಾಲುದಾರಿಕೆ ವಹಿಸಲಿವೆ ಎಂದು ಹೇಳಿದರು. ‘ಅನೇಕ ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಸದೃಢವಾಗಿ ಬೆಳೆದಿವೆ. ಇವು ಹೀಗೆಯೇ ಮುಂದುವರಿಯುವ ವಿಶ್ವಾಸವಿದೆ. ದೊಡ್ಡ ಸವಾಲು ಎದುರಾಗಿರು ಈ ಸಂದರ್ಭದಲ್ಲಿ ಅಮೆರಿಕ ಆಡಳಿತ ಬೆಂಬಲಕ್ಕೆ ನಿಂತಿರುವುದು ಮತ್ತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಜೈಶಂಕರ್ ಅವರನ್ನು ಉಲ್ಲೇಖಿಸಿ ಅಮೆರಿಕ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಹೇಳಿದೆ. 

  



ಸುದ್ದಿ ಓದಿ