ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಮೋದಿ- ಬೈಡನ್ ಆಗ್ರಹ
ವಾಷಿಂಗ್ಟನ್, ಫೆಬ್ರವರಿ 9: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತವರಣ ಮತ್ತು ಗಲಭೆ ಪೀಡಿತ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಲವಾಗಿ ಪ್ರತಿಪಾದಿಸಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ನಿಕಟ ಸಹಕಾರ ಮುಂದುವರಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ. ದೂರವಾಣಿ ಮೂಲಕ ಉಭಯ ನಾಯಕರು ಈ ವಿಷಯ ಕುರಿತು ಮಾತುಕತೆ ಮಾಡಿದ್ದಾರೆ. ಜನವರಿ 20 ರಂದು ಬೈಡನ್ ಅಧಿಕಾರ ವಹಿಸಿಕೊಂಡ ನಂತರ ಅವರ ಇದು ಅವರ ಮೊದಲ ದೂರವಾಣಿ ಸಂಭಾಷಣೆಯಾಗಿದೆ. ಇಬ್ಬರು ನಾಯಕರು ಪ್ರಾದೇಶಿಕ ಸಮಗ್ರತೆ ಸೇರಿದಂತೆ ಮುಕ್ತ ಇಂಡೋ-ಪೆಸಿಫಿಕ್ ವಲಯ ಉತ್ತೇಜಿಸಲು, ಈ ನಿಟ್ಟಿನಲ್ಲಿ ಪರಸ್ಪರ ನಿಕಟ ಸಹಕಾರ ಮುಂದುವರಿಸಲು ಒಪ್ಪಿದ್ದಾರೆ ಎಂದು ನಂತರ ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ. ಬೈಡೆನ್ ವಿಶ್ವದಾದ್ಯಂತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಬೇಕಾದ ಬಯಕೆಯನ್ನು ಒತ್ತಿ ಹೇಳಿದ್ದಾರೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳೇ ಅಮೆರಿಕ -ಭಾರತ ಸಂಬಂಧಕ್ಕೆ ಸುಭದ್ರ ಅಡಿಪಾಯವಾಗಿದೆ ಎಂದೂ ಶ್ವೇತಭವನ ಸ್ಪಷ್ಟಪಡಿಸಿದೆ.