ಸಂತೋಷ ಸೂಚ್ಯಂಕ.. ಪಾಕಿಸ್ತಾನ, ಬಾಂಗ್ಲಾ ಕ್ಕಿಂತ ಭಾರತ ಹಿಂದುಳಿದಿದೆ…!
ವಿಶ್ವಸಂಸ್ಥೆ, ಮಾ 20: ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲಾಂಡ್ ಸತತ ನಾಲ್ಕನೇ ಬಾರಿ ಅಗ್ರಸ್ಥಾನ ಮುಡಿಗೇರಿಸಿಕೊಂಡಿದೆ. ಜಗತ್ತಿನಾದ್ಯಂತ 149 ದೇಶಗಳಲ್ಲಿರುವ ಜನರು ಎಷ್ಟು ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಫಿನ್ಲಾಂಡ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ವಿಶ್ವ ಸಂತೋಷ ವರದಿ -2021 ಅನ್ನು ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ 139 ನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಭಾರತ ಕಳೆದ ವರ್ಷಕ್ಕಿಂತ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಸಂತೋಷ ಸೂಚ್ಯಂಕದಲ್ಲಿ ಭಾರತ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಚೀನಾಕ್ಕಿಂತ ಹಿಂದುಳಿದಿದೆ.
ವರದಿಯ ಪ್ರಕಾರ ಪಾಕಿಸ್ತಾನ 105 ನೇ ಸ್ಥಾನ, ಬಾಂಗ್ಲಾದೇಶ 101 ನೇ ಸ್ಥಾನ ಹಾಗೂ ಚೀನಾ 84 ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ 149, ಜಿಂಬಾಬ್ವೆ 148 ಹಾಗೂ ರುವಾಂಡಾ 147 ಕೊನೆಯ ಮೂರು ಸ್ಥಾನಗಳಲ್ಲಿವೆ ವಿಶ್ವಸಂಸ್ಥೆ ಪ್ರತಿವರ್ಷ ಸಂತೋಷ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. ಸೂಚ್ಯಂಕವು ಗ್ಯಾಲಪ್ ವರ್ಲ್ಡ್ ಪೋಲ್ ಅನ್ನು ಆಧರಿಸಿದೆ. ಇದಲ್ಲದೆ, ದೇಶಗಳ ಜಿಡಿಪಿ , ಸಾಮಾಜಿಕ ಭದ್ರತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸೂಚ್ಯಂಕ ಆಯಾ ದೇಶಗಳ ಜಿಡಿಪಿ, ಸಾಮಾಜಿಕ ಭದ್ರತೆ, ಲೋಕೋಪಕಾರ, ಸಾರ್ವಜನಿಕ ಆರೋಗ್ಯ ಪರಿಸ್ಥಿತಿಗಳು, ಭ್ರಷ್ಟಾಚಾರ ಹಾಗೂ ಸಾರ್ವಜನಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.2021 ವಿಶ್ವದ ಅಗ್ರ 20 ಸಂತೋಷದ ದೇಶಗಳ ಪಟ್ಟಿ ... 1. ಫಿನ್ಲ್ಯಾಂಡ್ 2. ಡೆನ್ಮಾರ್ಕ್ 3. ಸ್ವಿಟ್ಜರ್ಲೆಂಡ್ 4. ಐಸ್ಲ್ಯಾಂಡ್ 5. ನೆದರ್ಲ್ಯಾಂಡ್ಸ್ 6. ನಾರ್ವೆ 7. ಸ್ವೀಡನ್ 8. ಲಕ್ಸೆಂಬರ್ಗ್ 9. ನ್ಯೂಜಿಲೆಂಡ್ 10. ಆಸ್ಟ್ರಿಯಾ 11. ಆಸ್ಟ್ರೇಲಿಯಾ 12. ಇಸ್ರೇಲ್ 13. ಜರ್ಮನಿ 14. ಕೆನಡಾ 15. ಐರ್ಲೆಂಡ್ 16. ಕೋಸ್ಟರಿಕಾ 17. ಯುನೈಟೆಡ್ ಕಿಂಗ್‌ಡಮ್ 18. ಜೆಕ್ ಗಣರಾಜ್ಯ 19. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ 20. ಬೆಲ್ಜಿಯಂ ಸ್ಥಾನಗಳಲ್ಲಿವೆ.