ಕೋವಿಡ್ : 24 ಗಂಟೆಯಲ್ಲಿ 76,855 ಪ್ರಕರಣ ದಾಖಲಿಸಿದ ಬ್ರೆಜಿಲ್
ಮಾಸ್ಕೊ, ಮೇ 22: ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್ 76,855 ಕೋವಿಡ್ ಪ್ರಕರಣ ದಾಖಲಿಸಿದ್ದು ಸೋಂಕಿನ ಒಟ್ಟು ಸಂಖ್ಯೆ 15,970,949 ಕ್ಕೆ ಏರಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಶುಕ್ರವಾರ ತಡರಾತ್ರಿ ತಿಳಿಸಿದೆ. ಸಚಿವಾಲಯದ ಪ್ರಕಾರ, ಸಾವಿನ ಸಂಖ್ಯೆ ಕಳೆದೊಂದು ದಿನದಲ್ಲಿ 2,215 ರಷ್ಟಿದ್ದು, ಮೃತರ ಒಟ್ಟು ಸಂಖ್ಯೆ 446,309 ಜನರಿಗೆ ತಲುಪಿದೆ. ಈವರೆಗೂ 14.42 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ.ಕೋವಿಡ್ ಸಾವು ನೋವುಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಬ್ರೆಜಿಲ್ ಎರಡನೇ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ. ದೃಢಪಡಿಸಿದ ಅತಿಹೆಚ್ಚು ಕೊರೋನಾ ಪ್ರಕರಣ ಹೊಂದಿರುವ ದೇಶಗಳಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದ್ದು, ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ಕಳೆದ 2020 ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ 19 ಏಕಾಏಕಿ ಎದುರಾದ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವಾದ್ಯಂತ 165.71 ದಶಲಕ್ಷಕ್ಕೂ ಹೆಚ್ಚು ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, 3.43 ದಶಲಕ್ಷಕ್ಕೂ ಹೆಚ್ಚು ಸಾವುನೋವುಗಳಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.