130 ದೇಶಗಳಿಗೆ ಕೋವಿಡ್ ವ್ಯಾಕ್ಸಿನ್ ತಲುಪಿಲ್ಲ; ವಿಶ್ವಸಂಸ್ಥೆ ಕಳವಳ
ನ್ಯೂಯಾರ್ಕ್, ಫೆ 18: ಜಗತ್ತಿನಲ್ಲಿ ಕೋವಿಡ್ -19 ಲಸಿಕೆ ವಿತರಣೆ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಟೀಕಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 130 ದೇಶಗಳಿಗೆ ಈವರೆಗೆ ಒಂದೇ ಒಂದು ಲಸಿಕೆಯ ಡೋಸ್ ಕೂಡ ತಲುಪಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಈವರೆಗೆ ಉತ್ಪಾದಿಸಲಾದ ಒಟ್ಟು ಲಸಿಕೆಗಳಲ್ಲಿ ಶೇ 75 ರಷ್ಟು ಲಸಿಕೆಗಳು ಕೇವಲ ಹತ್ತು ದೇಶಗಳು ಮಾತ್ರ ಬಳಸಿಕೊಂಡಿವೆ ಎಂದು ಅವರು ಹೇಳಿದರು. ಲಸಿಕೆ ವಿಷಯದಲ್ಲಿ ಸಮಾನ ವಿತರಣೆ ಎಂಬುದು ಕಷ್ಟಕರ ಪರಿಸ್ಥಿತಿಯಲ್ಲಿದ್ದು, ವಿಶ್ವ ಸಮುದಾಯದ ಮುಂದಿರುವ ನೈತಿಕ ಪರೀಕ್ಷೆ ಎಂದು ಅವರು ಹೇಳಿದ್ದಾರೆ.
ವಿಶ್ವದ ಎಲ್ಲ ದೇಶಗಳಿಗೆ ಲಸಿಕೀಕರಣ ನಡೆಯುವಂತೆ 'ಜಾಗತಿಕ ವ್ಯಾಕ್ಸಿನೇಷನ್ ಯೋಜನೆ' ತರಬೇಕಾದ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸಹ ಲಸಿಕೆ ವಿತರಣೆಯ ಬಗ್ಗೆ ಹಲವಾರು ಬಾರಿ ಕಳವಳ ವ್ಯಕ್ತಪಡಿಸಿದೆ. ಶ್ರೀಮಂತ ರಾಷ್ಟ್ರಗಳು " ಲಸಿಕೆಯನ್ನು ಮೊದಲು ತಮ್ಮ ದೇಶಗಳಿಗೆ ನೀಡುವ" ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಧನಿಕ ದೇಶಗಳು ಲಸಿಕೆಯ ಡೋಸ್ ಗಳನ್ನು ಎಲ್ಲಾ ದೇಶಗಳಿಗೆ ಸಮಾನವಾಗಿ ವಿತರಿಸುವಂತೆ ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಮನವಿ ಮಾಡಿದ್ದಾರೆ.